Index   ವಚನ - 385    Search  
 
ಶಿವಜ್ಞಾನಸಂಪನ್ನನಾದ ಶರಣಂಗೆ ಹಿರಿದೊಂದಾಶ್ಚರ್ಯವು ತೋರದಾಗಿ, ಅದೇನು ಕಾರಣವೆಂದಡೆ: ಆತನ ಮನ ಲಿಂಗದಲ್ಲಿ ಲೀಯವಾದ ಕಾರಣ. ಸೂರ್ಯಂಗೆ ಶೀತರುಚಿಗಳು ತೋರಿದರೂ, ಚಂದ್ರನಿಗೆ ಉಷ್ಣರುಚಿಗಳು ತೋರಿದರೂ, ಅಗ್ನಿ ತಲೆಕೆಳಕಾಗಿ ಉರಿದಡೆಯೂ, ತೋರುವ ನಾನಾ ಆಶ್ಚರ್ಯಂಗಳೆಲ್ಲ ಮಾಯಾವಿಲಾಸವೆಂದರಿದ ಶರಣಂಗೆ ಒಂದಾಶ್ಚರ್ಯವೂ ತೋರದಾಗಿ ಆತ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅರಿವಿನೊಳಗಡಗಿದನು.