ಅನಂತಕಾಲ ಅಗಲಿದ ನಲ್ಲನ ಕೂಡಿಹೆನೆಂಬ ಸತಿಗೆ
ಕೂಡಿದ ಬಳಿಕ ಕೂಡಿಹೆನೆಂಬ ಅವಸ್ಥೆಯುಂಟೆ ಹೇಳಾ?.
ಕ್ಷುಧೆಯಡಿಸಿದವ ಭೋಜನವ ಮಾಡಿದ ಬಳಿಕ
ಮತ್ತೆ ಭೋಜನವ ಮಾಡಿಹೆನೆಂಬ ಅವಸ್ಥೆಯುಂಟೇ ಹೇಳಾ?.
ಝಳ ಹತ್ತಿದವ ಉದಕದಲ್ಲಿ ಮುಳುಗಿದ ಬಳಿಕ
ಮತ್ತೆ ಉದಕದಲ್ಲಿ ಮುಳುಗಿಹೆನೆಂಬ ಅವಸ್ಥೆಯುಂಟೆ ಹೇಳಾ?.
ಶಿವನ ನೆನೆನೆನೆದು ಮನ ಶಿವನಲ್ಲಿ ಲೀಯವಾದ ಬಳಿಕ
ಮತ್ತೆ ನೆನೆದಿಹೆನೆಂಬ ಅವಸ್ಥೆಯುಂಟೆ ಹೇಳಾ?
ಅನುಪಮ ನಿಜಾನುಭವ ಸಂಧಾನ ನಿಂದ ನಿಜವು ತಾನೇ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು.