Index   ವಚನ - 387    Search  
 
ಅನುವನರಿದು ಅನುಭಾವಿಯಾದ ಕಾರಣ ಸಮ್ಯಗ್‍ಜ್ಞಾನದಿಂದ ತನ್ನನರಿದು, ತನ್ನನೆ ಶಿವಭಾವವಾಗಿ ಕಂಡು ಆ ಶಿವಭಾವದಲ್ಲಿ ತನ್ನಹೃದಯವ ಸಮ್ಮೇಳವ ಮಾಡಿದ ಶರಣನು. ತಾನೆ ಶಿವನ ಪರಮೈಶ್ವರ್ಯಕ್ಕೆ ಭಾಜನವಾಗಿ ಸರ್ವಲೋಕವನು ಶಿವನೊಳಗಡಗಿಸಿದನಾಗಿ, ಆ ಶಿವನ ತನ್ನೊಳಗಡಗಿಸಿ, ಆ ಶಿವನಲ್ಲಿ ಮನವ ನಿಲಿಸಿ ನೆನೆವುತ್ತಿರಲು ಆ ನೆನೆವ ಮನಸಿನ ಲಯಕ್ಕೆ ಭಾಜನವಾದಾತ ಶಿವನೆಂದರಿದನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.