ಹೊನ್ನು ಹೆಣ್ಣು ಮಣ್ಣು ತನಗೆ ಸಂಬಂಧವೆಂದು ಹೇಳಿಕೊಂಬರು
ತನಗೆ ಸಂಬಂಧವೇನು?.
ಬ್ರಹ್ಮಚಾರಿಯಾದ ಮೇಲೆ[ಬಿ]ಡದಾಚರಿಸಿದರೆ.
ಮುಕ್ತಿಸ್ಥಲ ದೂರವಾಯಿತ್ತು.
ಅದು ಇದ್ದರೇನು? ಪರೋಪಕಾರವಿರಬೇಕು.
ಜಂಗಮಕ್ಕೆ ಹೆಣ್ಣಿನಲ್ಲಿ ಸಿಕ್ಕಿದರೆ
ಅವರಿಗೆ ಹಿಂದಣ ಸಂಬಂಧವಿದ್ದ ಕಾರಣ ದೊರಕಿತ್ತು.
ಆವ ನಡೆಯಲ್ಲಿ ನಡೆದರೇನು?
ಕಂಡು ಮನದಲ್ಲಿ ಜರಿದೆನಾದರೆ ಜಂಗಮವೆನಗಿಲ್ಲ.
ಪಾದೋದಕ ಪ್ರಸಾದಕ್ಕೆ ದೂರವಾಯಿತ್ತು.
ನಿಮ್ಮನರಿದು ನಡೆದಾತಂಗೆ ಸಾಧನೆಯಾಗುವುದಲ್ಲದೆ,
ಬೆಳಗಿನ ಕತ್ತಲೆಯ ಕಂಡು ಕತ್ತಲೆಯಾಯಿತ್ತೆಂದು,
ದೀಪವ ಮುಟ್ಟಿಸಲೆಂದು,
ತನ್ನೊಳಗಿರ್ದ ಜೋತಿಯ ಬೆಳಗಮಾಡಿ,
ಜ್ಞಾನವನುದ್ಧರಿಸಿರ್ಪ ಶರಣನ ಹೆಜ್ಜೆಯ ತಿಳಿವರೆ?
ನೋಡಾ, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.