Index   ವಚನ - 66    Search  
 
ಈ ಜಗದೊಳಗಣ ಆಟವ ನೋಡಿದರೆ, ಎನಗೆ ಹಗರಣವಾಗಿ ಕಾಣಿಸುತ್ತಿದೆ. ಅದೇನು ಕಾರಣವೆಂದರೆ, ಹಿಂದಣ ಮುಕ್ತಿಯನರಿಯರು, ಮುಂದಣ ಮುಕ್ತಿಯನರಿಯರು. ಬಂದ ಬಂಬ ಭವದಲ್ಲಿ ಮುಳುಗುತ್ತಲಿದ್ದಾರೆ. ನಾನಿದರಂದವನರಿದು, ದ್ವಂದ್ವವ ಹರಿದು, ಜಗದ ನಿಂದೆ ಸ್ತುತಿಯ ಸಮಗಂಡು, ಹಿಂದ ಹರಿದು ಮುಂದನರಿದು, ಸದಮಳಾನಂದದಲ್ಲಿ ನಿಂದು, ಸಚ್ಚಿದಾನಂದದಲ್ಲಿ ಐಕ್ಯವಾಗಿ, ಸತ್ಯಶರಣರ ಪಾದದಲ್ಲಿ ನಿರ್ಮುಕ್ತನಾದೆನಯ್ಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.