Index   ವಚನ - 88    Search  
 
ಕಂಗಳ ಮಣಿಯ ಬೆಳಗಿನೊಳು, ಈರೇಳು ಭುವನದ ಶೃಂಗಾರವಡಗಿತ್ತು. ಆರೂ ಅರಿಯರಲ್ಲಾ. ಅತಿ ಶೃಂಗಾರದೊಳಗಣ ಗಂಧವನೊಂದು ಘ್ರಾಣ ನುಂಗಿತ್ತು. ಘ್ರಾಣದೊಳಗಣ ಗಂಧವ ಪ್ರಾಣ ನುಂಗಿತ್ತು. ಪ್ರಾಣದೊಳಗಣ ಗಂಧದ ಭಾವ ನುಂಗಿತ್ತು. ಭಾವದೊಳಗಣ ಗಂಧದ ಬಯಲು ನುಂಗಿತ್ತು. ಬಯಲೊಳಗಣ ಗಂಧವ ಮಹಾಬಯಲ ಕೂಡಿದ ಲಿಂಗೈಕ್ಯಂಗೆ ಭವಬಂಧನವಿಲ್ಲೆಂದಿತ್ತು ಗುರುವಚನ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.