Index   ವಚನ - 89    Search  
 
ಕಂಡುದ ಹೇಳಿಹೆನೆ? ಸಮಯಕ್ಕೆ ದೂರ, ಎನ್ನ ಇರವನರಿಯರು. ಲೆಂಡನೆಂಬರು, ಸುಮ್ಮನಿದ್ದೇನೆ. ಇವರೆನ್ನ ಆರೈದು ಕಂಡುದ ನುಡಿವರು. ಎನ್ನ ಮುಟ್ಟಿದವರ ಎನ್ನಂತೆ ಮಾಡಿಕೊಂಬೆ. ಎನ್ನ ಅರಿಯದವರ ಹಾದಿಯ ಹೋಗೆ. ಎನ್ನನರಿತ ಜಂಗಮದ ಸಂಗವ ಮಾಡುವೆ. ಜಗದ ಸಂಗವನೊಲ್ಲೆ, ನಿಗಮಾಗಮಶಾಸ್ತ್ರವನೊಲ್ಲೆ. ಅವೆಲ್ಲವು ಸ್ಥಲ ನೆಲೆ ಇಟ್ಟು ಹೇಳುವವು. ಎಮ್ಮ ಶರಣರು ನುಡಿದ ಶಾಸ್ತ್ರಕ್ಕೆ ಸ್ಥಲ ನೆಲೆ ಇಲ್ಲ. ಇಂತಿವೆಲ್ಲವ ಬಲ್ಲೆನಾಗಿ, ಎನ್ನಂಗಕ್ಕೆ ಪ್ರಾಣಕ್ಕೆ ಭವವಿಲ್ಲ, ಬಂಧನವಿಲ್ಲ. ಅದೇಕೆಂದರೆ: ಲಿಂಗವೆಂದ ಕಾರಣ, ನಾನೆಂಬುದಿಲ್ಲ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.