Index   ವಚನ - 99    Search  
 
ಕಾಯಸ್ಥಲ, ಕರಸ್ಥಲ, ಉರಸ್ಥಲ, ಶಿ ಸ್ಥಲ, ಪ್ರಾಣಸ್ಥಲ, ಭಾವಸ್ಥಲವೆಂದು ನುಡಿದಾಡುವರು. ಆ ಸ್ಥಲದೊಳಗಣ ಸ್ವಯಸ್ಥಲವನರಿಯರು ಕಾಣಿರೆ. ಸ್ವಯಸ್ಥಲವೆಂತಿಪ್ಪುದೆಂದರೆ, ಕಾಯಸ್ಥಲವನರಿದರೆ, ಅದು ತಾನೇ ಲಿಂಗವಾಯಿತ್ತು. ಕರಸ್ಥಲವನರಿದರೆ, ಕೈಲಾಸ ಮರ್ತ್ಯ ತನ್ನೊಳಗಾಯಿತ್ತು. ಉರಸ್ಥಲವನರಿದರೆ, ಪರವು ತನ್ನೊಳಗಾಯಿತ್ತು. ಶಿರಸ್ಥಲವನರಿದರೆ ಶಿವನೆಂಬುದಕ್ಕೆ ಇಲ್ಲ. ಪ್ರಾಣಸ್ಥಲವನರಿದರೆ, ಭಯ ಮರಣಾದಿಗಳಿಲ್ಲ. ಭಾವಸ್ಥಲವನರಿದರೆ, ಇನ್ನಾವುದೂ ನೆನಹಿಲ್ಲ. ಇದರ ಭೇದವನರಿಯದ, ಸ್ಥಲನೆಲೆಯುಂಟೆಂಬಿರಿ. ಅದರ ಭೇದವ ನೀವು ಅರಿಯಿರಿ ಕಾಣಿರೊ. ಸ್ಥಲವೆಂದರೆ ಅಂಗ, ನೆಲೆಯೆಂದರೆ ಪ್ರಾಣ. ಇದನರಿಯದೆ ತಲೆ ಕೆಳಗಾಗಿ ಹೋದರು. ಆರು? ದೇವದಾನವರು. ನಿಮ್ಮ ಪಾಡೇನೋ ನರಗುರಿಗಳಿರಾ? ಇದನರಿದು, ಇನ್ನಾದರೂ ನಮ್ಮ ಶರಣರಿಗೆರಗಿ ಬದುಕಿರೊ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.