Index   ವಚನ - 134    Search  
 
ದೀಕ್ಷಾಗುರು, ಶಿಕ್ಷಾಗುರು, ಮೋಕ್ಷಗುರುವೆಂದು ಹೆಸರಿಟ್ಟುಕೊಂಡು ನುಡಿವಿರಿ. ದೀಕ್ಷಾಗುರುವಾದಡೆ, ಮಲತ್ರಯಂಗಳ ತಾ ಮುಟ್ಟದೆ, ಆ ಶಿಷ್ಯನ ತಟ್ಟಲೀಯದೆ, ಅಂಗಕ್ಕೆ ಆಚಾರವನಳವಡಿಸಿಕೊಟ್ಟು, ಪ್ರಾಣಕ್ಕೆ ಅರಿವ ತೋರಿ ಪ್ರಸಾದಕಾಯವ ಮಾಡಿದರೆ, ಆತನೇ ದೀಕ್ಷಾಗುರುವೆಂಬೆ. ಶಿಕ್ಷಾಗುರುವಾದಾತ ಶೂರಧೀರನಾಗಿ ಪಟುಭಟನಾಗಿ, ಪರಸಮಯಕ್ಕೆ ಪರಂಜ್ಯೋತಿಯಂತಾಗಿ, ಅರಗಳಿಗೆ ಆರ್ಭಟಿಸುವ ಸಿಂಹದಂತಾಗಿ, ತನ್ನ ಸ್ವಯಂಮಕ್ಕೆ ಸ್ವಯಂಜ್ಯೋತಿಯಂತೆ ಇರಬಲ್ಲರೆ, ಶಿಕ್ಷಾಗುರುವೆಂಬೆ. ಮೋಕ್ಷಗುರುವೆಂತಿರಬೆಕೆಂದಡೆ, ತನ್ನ ನಂಬಿದ ಸಜ್ಜನ ಭಕ್ತರ, ವಿರಕ್ತರ ತನ್ನಂತೆ ಮಾಡಿಕೊಂಬುದು. ಅವರ ತನುತ್ರಯ, ಮನತ್ರಯ, ಧನತ್ರಯದ ನೆಲೆಯನರುಹಿ, ಇಂತೀ ತ್ರಿವಿಧವನು ತ್ರಿವಿಧಕ್ಕೆ ಮುಖವ ಮಾಡಿ, ತ್ರಿವಿಧದಲ್ಲಿ ತಾನಡಗಿ, ತನ್ನೊಳಗವರಡಗಿದಡೆ ಮೋಕ್ಷಾಗುರುವೆಂಬೆ. ಇಂತಾದರೆ ತ್ರಿವಿಧವು ಒಂದಂಗ. ಇಂತೀ ಸ್ಥಲದ ನಿರ್ಣಯವನರಿಯದಿದ್ದರೆ, ಆ ಮೂವರನು ಮುಂದುಗೆಡಿಸಿ ಮೂಗ ಕೊಯ್ದು, ಇಟ್ಟಿಗಿಯಲದ್ದಿ, ದರ್ಪಣವ ತೋರಿ, ಅವರ ದರ್ಪವ ಕೆಡಿಸುವನಲ್ಲದೆ ಅವರ ಮೆರೆವನಲ್ಲ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ .