Index   ವಚನ - 141    Search  
 
ನಾವು ಜಂಗಮವೆಂಬರು, ತಾವು ಭಕ್ತರೆಂಬರು. ಭಕ್ತ, ಜಂಗಮದ ನಿಲುಕಡೆ ಎಂತಿರಬೇಕೆಂದರೆ, ಮೂರುವಿಡಿದು ಮೂರನರಿದಡೆ ಭಕ್ತನೆಂಬೆ. ಮೂರ ಬಿಟ್ಟರೆ, ಮೂರ ಕಂಡರೆ, ಜಂಗಮವೆಂಬೆ. ಈ ಉಭಯವು ಒಂದಾದ ಭೇದವೆಂತೆಂದರೆ, ಭಕ್ತನ ನಡೆನುಡಿಯಲ್ಲಿ ಕವಲುದೋರುತಿರ್ದಡೆ, ಹೀಗಲ್ಲವೆಂದು ಆ ಸ್ಥಲಕ್ಕೆ ತಕ್ಕ ಹಾಗೆ ನಿಲುಕಡೆಯ ತೋರಿ ಕೊಟ್ಟು, ಆತನಲ್ಲಿದ್ದ ಕರ್ಮವು ತನ್ನ ಮುಟ್ಟದಂತೆ, ಅವನ ತಟ್ಟದಂತೆ, ಈ ಉಭಯಕ್ಕೊಡೆಯನಾಗಿ ನಿಂದರೆ, ಜಂಗಮಲಿಂಗವೆಂಬೆ. ಇಂತಾದರೆ ಆ ಭಕ್ತ ಜಂಗಮಕ್ಕೆ ನಮೋ ನಮೋ ಎಂಬೆ. ಇಂತಲ್ಲದೆ ಇದ್ದವರ ಎನ್ನತ್ತ ತೋರದಿರಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.