ಪುರಾತರು ಪುರಾತರು ಎಂದು,
ಪುರಾಣದೊಳಗಣ ಕಥೆಯನೆ ಕಲಿತುಕೊಂಡು,
ಪುರದ ಬೀದಿಯೊಳಗೆ ಹರದರಂತೆ,
ಮಾತಿನ ಹಸರವನಿಕ್ಕಿ ಮಾರುವ ಅಣ್ಣಗಳಿರಾ,
ನೀವು ಕೇಳಿರೊ.
ಅಂದು ಹೋದವರ ಸುದ್ದಿಯ ನುಡಿದರೆ,
ಇಂದು ಬಂದರೊ ನಿಮಗೆ
[ಅಂದು ಹೋದವರ ]ಇಂದು
ಬಂದವರ ಒಂದೇ ಎಂದರಿದ ಭಕ್ತರ
ಆಚರಣೆಯ ತೋರಿ ಬದುಕಿಸಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.