Index   ವಚನ - 158    Search  
 
ಬಟ್ಟಬಯಲ ತುಟ್ಟತುದಿಯ ನಟ್ಟನಡುವಣ, ಕಟ್ಟಕಡೆಯ ಮೆಟ್ಟಿ ನೋಡಿ, ಉಟ್ಟುದನಳಿದು ಒಟ್ಟಬತ್ತಲೆಯಾದೆ. ಇನ್ನು ಬಿಟ್ಟುದ ಹಿಡಿಯಬಾರದು, ಹಿಡಿದುದ ಬಿಡಬಾರದು. ಇದಕ್ಕೆ ಒಡೆಯನಾವನೆಂದು ನೋಡಲಾಗಿ ನೋಡಿಹೆನೆಂದರೆ ನೋಟಕ್ಕಿಲ್ಲ. ಕೂಡಿಹೆನೆಂದರೆ ಕೂಟಕ್ಕಿಲ್ಲ, ಹಿಡಿದಿಹೆನೆಂದರೆ ಹಿಡಿಹಿಗಿಲ್ಲ. ಪೂಜಿಸಿಹೆನೆಂದರೆ ಪೂಜೆಗಿಲ್ಲ. ಇದ ಮೆಲ್ಲಗೆ ಓಜೆಯಿಂದ ನೋಡಿಲಾಗಿ, ನೋಡುವ ನೋಟವು ತಾನೆ, ಕೂಡುವ ಕೂಟವು ತಾನೆ, ಹಿಡಿವುದು ಆ ಹಿಡಿಗೆ ಸಿಕ್ಕಿಕೊಂಬುದು ತಾನೆ, ಪೂಜಿಸುವುದು ಪೂಜೆಗೊಂಬುದು ತಾನೆ. ನಾನಿದರ ಭೇದವನರಿದು ಆದಿ ಅನಾದಿಯನು ಏಕವ ಮಾಡಿ, ನಾನಲ್ಲೇ ಐಕ್ಯನಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.