Index   ವಚನ - 2    Search  
 
ಒಂದನಹುದೆನ್ನದೆ, ಒಂದನಲ್ಲಾ ಎನ್ನದೆ, ಬಾಯಿಗೆ ಬಂದಂತೆ ಅಂದಚೆಂದವ ಸೇರಿಸಿ, ಬಾಯಿಗೆ ಬಂದಂತೆ ಒಂದೊಂದ ನುಡಿಯದೆ, ಇದು ಬಂಧ ಮೋಕ್ಷ ಕರ್ಮವೆಂದು ದಂದುಗವ ಗಂಡನಿಕ್ಕಿಕೊಂಡಾಡದೆ, ತಾ ನಿಂದಲ್ಲಿ ನಿಜಸುಖಿಯಾದ ಮತ್ತೆ, ಇತ್ಯಾದಿಗಳಲ್ಲಿ ಹೊತ್ತುಹೋರಲೇತಕ್ಕೆ? ಶಿಲೆ ರಸವನುಂಡಂತೆ, ಮರೀಚಿಕಾ ಜಲದಂತೆ, ಅಂಬುವಿನ ಸಂಭ್ರಮದಂತೆ, ಕುಂಭದಲ್ಲಿ ಅಡಗಿದ ಸರ್ಪನ ಇಂದ್ರಿಯದಂತೆ, ಇದು ಗುಣಲಿಂಗಾಂಗಿಯ ನಿರ್ಗಮನ. ನಿಃಕಳಂಕ ಕೂಡಲಚೆನ್ನಸಂಗಮದೇವ, ತಾನಾದ ಶರಣನ ಇರವು.