Index   ವಚನ - 52    Search  
 
ಕೈಲಾಸ ಮರ್ತ್ಯಲೋಕ ಎಂಬರು. ಕೈಲಾಸವೆಂದಡೇನೊ, ಮರ್ತ್ಯಲೋಕವೆಂದಡೇನೊ? ಅಲ್ಲಿಯ ನಡೆಯೂ ಒಂದೆ, ಇಲ್ಲಿಯ ನಡೆಯೂ ಒಂದೆ. ಅಲ್ಲಿಯ ನುಡಿಯೂ ಒಂದೆ, ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರು. ಕೈಲಾಸದವರೆ ದೇವರ್ಕಳೆಂಬರು; ಸುರಲೋಕದೊಳಗೆ ಸಾಸಿರ ಕಾಲಕ್ಕಲ್ಲದೆ ಅಳಿದಿಲ್ಲವೆಂಬರು. ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು. ಇದ ಕಂಡು ನಮ್ಮ ಶರಣರು ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ, ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು, ಮಹಾಬೆಳಗನೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.