Index   ವಚನ - 53    Search  
 
ಜಗದೊಳಗೆ ಹುಟ್ಟಿ ಜಗದ ಪ್ರಪಂಚ ಹಿಂಗಿ, ಜಂಗಮದೊಳಗಾಡುತ್ತ, ಲಿಂಗದೊಳಗೆ ನೋಡುತ್ತ, ಅಂಗನೆಯರ ಸಂಗವ ಮಾಡಿಹೆನೆಂಬಿರಿ. ಅದೆಂತೆಂದಡೆ, ನೋಟಕಿಲ್ಲದ ಘನದ ಕೂಟವ ಕೂಡುವ ಪರಿಯೆಂತಯ್ಯಾ? ರೂಪಿಲ್ಲದುದ ರೂಪಿಗೆ ತರುವ ಪರಿಯೆಂತಯ್ಯಾ? ಹೇಳಬಾರದ ಘನವ ಕೇಳುವ ಪರಿಯೆಂತಯ್ಯಾ? ಅತ್ಯತಿಷ್ಠದ್ದಶಾಂಗುಲಂ ಎಂಬ ವಸ್ತು ಹಿಡಿದಡೆ ಹಿಡಿಗಿಲ್ಲ, ನುಡಿದಡೆ ನುಡಿಗಿಲ್ಲ. ಒಡಲೊಳಗಿಲ್ಲ; ಹೊರಗಿಲ್ಲ, ಒಳಗಿಲ್ಲ. ವಾಚಾತೀತ ಮನೋತೀತ ಭಾವಾತೀತವಾಗಿದ್ದ ವಸ್ತು ತನ್ನೊಳಗೆ ತಾನೆ ತನ್ಮಯವಾಗಿ ಇರುವುದ ತಿಳಿಯಲರಿಯದೆ ಭಿನ್ನವಿಟ್ಟರಸುವಿರಿ. ಅದೆಂತೆಂದಡೆ: ಪುಷ್ಪಪರಿಮಳದಂತೆ, ತುಪ್ಪಕಂಪಿನಂತೆ,ಅಲೆ ನೀರಿನಂತೆ, ಕಣ್ಣುಕಪ್ಪಿನಂತೆ, ಚಿನ್ನ ಬಣ್ಣದಂತೆ, ಸಿಪ್ಪೆಹಣ್ಣಿನಂತೆ, ಒಪ್ಪ ಚಿತ್ರದಂತೆ, ಕರ್ಪೂರ ಜ್ಯೋತಿಯೊಳಡಗಿದಂತೆ ನೆನಹು ನಿಷ್ಪತ್ತಿಯಾದ ಶರಣ ಅಪ್ಪಣ್ಣಪ್ರಿಯಚೆನ್ನಬಸವಣ್ಣ ತಾನೆ ನೋಡಾ.