Index   ವಚನ - 74    Search  
 
ಒಂದು ಊರಿಗೆ ಒಂಬತ್ತು ಬಾಗಿಲು. ಆ ಊರಿಗೆ ಐವರು ಕಾವಲು, ಆರು ಮಂದಿ ಪ್ರಧಾನಿಗಳು, ಇಪ್ಪತ್ತೈದು ಮಂದಿ ಪರಿವಾರ. ಅವರೊಳಗೆ ತೊಟ್ಟನೆ ತೊಳಲಿ ಬಳಲಲಾರದೆ ಎಚ್ಚತ್ತು ನಿಶ್ಚಿಂತನಾದ ಅರಸನ ಕಂಡೆ. ಆ ಅರಸಿನ ಗೊತ್ತುವಿಡಿದು, ಒಂಬತ್ತು ಬಾಗಿಲಿಗೆ ಲಿಂಗಸ್ಥಾಪ್ಯವ ಮಾಡಿ, ಒಂದು ಬಾಗಿಲಲ್ಲಿ ನಿಂದು, ಕಾವಲವನೆ ಕಟ್ಟಿಸಿ, ಪ್ರಧಾನಿಗಳನೆ ಮೆಟ್ಟಿಸಿ, ಪರಿವಾರವನೆ ಸುಟ್ಟು, ಅರಸನ ಮುಟ್ಟಿಹಿಡಿದು ಓಲೈಸಲು ಸಪ್ತ ಧಾತು ಷಡು ವರ್ಗವನೆ ಕಂಡು, ಕತ್ತಲೆಯ ಕದಳಿಯ ದಾಂಟಿ, ನಿಶ್ಚಿಂತದಲ್ಲಿ ಬಚ್ಚಬರಿಯ ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.