ಘಟವೆಂಬ ಮಠದೊಳಗೆ ಮನವೆಂಬ ಮರ ಹುಟ್ಟಿತ್ತು.
ಬೇರುವರಿಯಿತ್ತು, ಅದಕ್ಕೆ ಶತಕೋಟಿ ಶಾಖೆ ಬಿಟ್ಟಿತ್ತು.
ಆ ಶಾಖೆಯ ಬೆಂಬಳಿಗೊಂಡು ಆಡುವರೆಲ್ಲ
ಮುಂದುಗಾಣದೆ ಸಂದುಹೋದರು.
ಇದನರಿದು ನಿಮ್ಮ ಶರಣರು ಹಿಂದೆ ನೋಡಿ
ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು,
ಮನವೆಂಬ ಮರದ ಬೇರನಗಿದು
ಶತಕೋಟಿ ಶಾಖೆಯನು ಸವರಿ,
ತುತ್ತತುದಿಯ ಮೇಲೆ ನಿಂದು ನೋಡುವನ್ನಕ್ಕ,
ನಾನೆತ್ತ ಹೋದೆನೆಂದರಿಯೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.