ಸಹಸ್ರದಳ ಕಮಲವ ಸೂಸದೆ ಮೇಲುಕಟ್ಟು ಕಟ್ಟಿ,
ಭಾಸುರವೆಂಬ ಹೃದಯದ ಸಿಂಹಾಸನವಿಕ್ಕಿ,
ಲೇಸಾಗಿ ಗುರುಸ್ವಾಮಿಯ ಮೂರ್ತಮಾಡಿಸಿ,
ನಾಲ್ಕೆಸಳ ಪದ್ಮವ ಸಮ್ಮಾರ್ಜನೆಯ ಮಾಡಿ,
ಆರೆಸಳ ಪದ್ಮವ ರಂಗವಾಲೆಯ ತುಂಬಿ,
ಹತ್ತೆಸಳ ಪದ್ಮವ ಕರಕಮಲವಂ ಮಾಡಿ,
ನಿರ್ಭಾವವೆಂಬ ಅಗ್ಗವಣಿಯಲ್ಲಿ ಮಜ್ಜನಕ್ಕೆರೆದು,
ಚಿದ್ಬೆಳಗೆಂಬ ಚಿದ್ವಿಭೂತಿಯ ಧರಿಸಿ,
ಶಾಂತಿಯೆಂಬ ಗಂಧವ ಧರಿಸಿ,
ಚಿತ್ತ ನಿರ್ಮಲವೆಂಬ ಅಕ್ಷತೆಯನರ್ಪಿಸಿ,
ಹೃತ್ಕಮಲವೆಂಬ ಅರಳಿದ ಪುಷ್ಪವ ಧರಿಸಿ,
ಸುಗಂಧವೆಂಬ ಧೂಪವ ಬೀಸಿ,
ಕಂಗಳೆ ದೀಪ, ಕರ್ಣವೆ ಗಂಟೆ,
ನಾಸಿಕವೆ ಆಲವಟ್ಟಲು,
ಜಿಹ್ವೆಯ ತಾಳ, ಪಾದವೆ ಪಾತ್ರದವರು,
ಹಸ್ತವೆ ಸೇವಕರು,
ನಿಶ್ಚಿಂತವೆಂಬ ಅಕ್ಕಿಯ ತಂದು,
ಪಶ್ಚಿಮವೆಂಬೊರಳಿಗೆ ನೀಡಿ,
ಏಕೋಭಾವವೆಂಬೊನಕೆಯ ಪಿಡಿದು ಥಳಿಸಿ,
ಸುಬುದ್ಭಿಯೆಂಬ ಮೊರದಲ್ಲಿ ಕೇರಿ,
ತ್ರಿಕೂಟವೆಂಬ ಒಲೆಯ ಹೂಡಿ,
ಕರಣಂಗಳೆಂಬ ಸೌದೆಯನಿಟ್ಟು,
ಜ್ಞಾನಾಗ್ನಿಯನುರುಹಲು,
ಒಮ್ಮನವೆಂಬ ಕಂದಲಿಗೆ ಆನಂದ ಜಲವೆಂಬಗ್ಗಣಿಯನೆತ್ತಿ,
ನಿಶ್ಚಿಂತವೆಂಬಕ್ಕಿಯ ನೀಡಿ,
ಸುಮ್ಮಾನವೆಂಬ ಹುಟ್ಟಿನಲ್ಲಿ ಉಕ್ಕಿರಿದು,
ಮನ ಬುದ್ಧಿಯೆಂಬ ಚಿಬ್ಬಲುಮರದಟ್ಟೆಯನಿಕ್ಕಿ,
ಅಹಂಕಾರವೆಂಬ ಭಾಜನದಲ್ಲಿ ಬಾಗಿ,
ಜ್ಞಾತೃ ಜ್ಞಾನ ಜ್ಞೇಯವೆಂಬ ಅಡ್ಡಣಿಗೆಯನಿರಿಸಿ,
ಮನವೆಂಬ ಹರಿವಾಣದಲ್ಲಿ ಗಡಣಿಸಿ,
ಆನಂದವೆಂಬಮೃತವನಾರೋಗಣೆಯ ಮಾಡಿ,
ನಿತ್ಯವೆಂಬಗ್ಗವಣಿಯಲ್ಲಿ ಹಸ್ತ ಪ್ರಕ್ಷಾಲನವ ಮಾಡಿಸಿ,
ಸತ್ವ-ರಜ-ತಮವೆಂಬ ವೀಳೆಯವ ಕೊಟ್ಟು,
ಅಂತಃಕರಣಚತುಷ್ಟಯವೆಂಬ ನಾಲ್ಕು ಕಾಲು ಮಾಡಿ,
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಮಂಚವ ಹಾಸಿ,
ನಾಸಿಕ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಎಂಬ
ಸುಪ್ಪತ್ತಿಗೆಯನು ಹಚ್ಚಡಿಸಿ,
ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ
ಒರಗು ಇಕ್ಕಿ,
ತತ್ವ ಪರತತ್ವವೆಂಬ ಹಸ್ತಕ್ಕೆ ಮೆತ್ತೆಯನಿಕ್ಕಿ,
ಸುತ್ತಣ ಪರಿಚಾರಕರು, ಆನೆ ಕುದುರೆ
ಅರಸು ಮನ್ನೆಯ ಪ್ರಧಾನಿಗಳು
ಎತ್ತ ಹೋದರೆಂದು ಅತ್ತಿತ್ತ ನೋಡುತ್ತಿರಲು,
ಊರು ಬಯಲಾಯಿತ್ತು, ಒಕ್ಕಲು ಓಡಿತ್ತು,
ಮಕ್ಕಳ ಗಲಭೆ ನಿಂದಿತ್ತು, ಮಾತಿನ ಮಥನವಡಗಿತ್ತು.
ಉತ್ತರದಲ್ಲಿ ವಸ್ತುವ ಕಂಡು ಓಲಗಂಗೊಟ್ಟಿರಲು,
ಓಲಗದಲ್ಲಿ ಲೋಲುಪ್ತವನೆಯ್ದಿ
ಆವಲ್ಲಿ ಹೋದನೆಂದರಿಯೆನಯ್ಯಾ.
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
Art
Manuscript
Music
Courtesy:
Transliteration
Sahasradaḷa kamalava sūsade mēlukaṭṭu kaṭṭi,
bhāsuravemba hr̥dayada sinhāsanavikki,
lēsāgi gurusvāmiya mūrtamāḍisi,
nālkesaḷa padmava sam'mārjaneya māḍi,
āresaḷa padmava raṅgavāleya tumbi,
hattesaḷa padmava karakamalavaṁ māḍi,
nirbhāvavemba aggavaṇiyalli majjanakkeredu,
cidbeḷagemba cidvibhūtiya dharisi,
śāntiyemba gandhava dharisi,
citta nirmalavemba akṣateyanarpisi,
Hr̥tkamalavemba araḷida puṣpava dharisi,
sugandhavemba dhūpava bīsi,
kaṅgaḷe dīpa, karṇave gaṇṭe,
nāsikave ālavaṭṭalu,
jihveya tāḷa, pādave pātradavaru,
hastave sēvakaru,
niścintavemba akkiya tandu,
paścimavemboraḷige nīḍi,
ēkōbhāvavembonakeya piḍidu thaḷisi,
subudbhiyemba moradalli kēri,
trikūṭavemba oleya hūḍi,
karaṇaṅgaḷemba saudeyaniṭṭu,
jñānāgniyanuruhalu,
om'manavemba kandalige ānanda jalavembaggaṇiyanetti,
niścintavembakkiya nīḍi,
Sum'mānavemba huṭṭinalli ukkiridu,
mana bud'dhiyemba cibbalumaradaṭṭeyanikki,
ahaṅkāravemba bhājanadalli bāgi,
jñātr̥ jñāna jñēyavemba aḍḍaṇigeyanirisi,
manavemba harivāṇadalli gaḍaṇisi,
ānandavembamr̥tavanārōgaṇeya māḍi,
nityavembaggavaṇiyalli hasta prakṣālanava māḍisi,
satva-raja-tamavemba vīḷeyava koṭṭu,
antaḥkaraṇacatuṣṭayavemba nālku kālu māḍi,
pr̥thvi appu tēja vāyu ākāśavemba man̄cava hāsi,
nāsika jihve nētra tvakku śrōtra emba
suppattigeyanu haccaḍisi,
prāṇa apāna vyāna udāna samānavemba
oragu ikki,
Tatva paratatvavemba hastakke metteyanikki,
suttaṇa paricārakaru, āne kudure
arasu manneya pradhānigaḷu
etta hōdarendu attitta nōḍuttiralu,
ūru bayalāyittu, okkalu ōḍittu,
makkaḷa galabhe nindittu, mātina mathanavaḍagittu.
Uttaradalli vastuva kaṇḍu ōlagaṅgoṭṭiralu,
ōlagadalli lōluptavaneydi
āvalli hōdanendariyenayyā.
Appaṇṇapriya cennabasavaṇṇa tāne nōḍā.