Index   ವಚನ - 19    Search  
 
ಆದಿಯಲ್ಲಿ ಪ್ರಸಾದ, ಏಕಮುಖ ಸಾಧಕರ ಮುಖದಿಂದ ಅನಂತಮುಖವಾದುದು. ಎಯ್ದಿ ನಿಂದಲ್ಲಿ ಮತ್ತೆ ಏಕಮುಖವಾದುದು. ಇದರ ಭೇದವ ಬಸವಣ್ಣ ಚೆನ್ನಬಸವಣ್ಣನ ಸಂಪಾದನೆಯಿಂದಲಾನರಿದೆನು. ಅರಿದಡೇನು ಎನಗಾಯತವಾಗದು. ಆಯತವಾದಡೇನು ಸನ್ನಹಿತವಾಗದು. ಗುರುಲಿಂಗ ಜಂಗಮದನುವನರಿರದ ವಿಶ್ವಾಸ, ಜ್ಞಾನಿಗಲ್ಲದೆ ಅಳವಡದು. ಆ ಪರಮ ವಿಶ್ವಾಸ ಸತ್ಸದಯದಿಂದಲ್ಲದೆ ಸಮನಿಸದು. ಇದು ಕಾರಣ, ಪ್ರಸಾದದಾದಿಕುಳವ ನಾನೆತ್ತ ಬಲ್ಲೆನಯ್ಯಾ? ಪ್ರಸಾದವೆಂಬುದು ಅನಿಂದ್ಯ, ಅಮಲ ಅಗೋಚರ, ನಿರಂಜನ, ನಿತ್ಯಸತ್ಯ, ಜ್ಞಾನಾನಂದ, ಪರಬ್ರಹ್ಮ, ನಿಶ್ಚಯ. ಅದು ತನ್ನ ತಾನೆ ನುಡಿವುತ್ತಿಹುದು. ಆ ನುಡಿಯೆ ಸುನಾದ, ಆ ಸುನಾದವೆ ಓಂಕಾರ. ಆ ಓಂಕಾರ ತಾನೆ ಮಹಾಜ್ಞಾನ, ಪರಮಚೈತನ್ಯ, ಪ್ರಸಿದ್ಧ ಪಂಚಾಕ್ಷರ. ಅದೆಂತೆಂದಡೆ: `ಪ್ರಣವೋ ಹಿ ಪರಬ್ರಹ್ಮ ಪ್ರಣವೋ ಹಿ ಪರಂ ಪದಂ' ಎಂದುದಾಗಿ, ಆ ಪ್ರಸಿದ್ಧ ಪಂಚಾಕ್ಷರವು ತನ್ನಿಂದ ತಾನೆ ಸಕಲ ನಿಷ್ಕಲವಾಯಿತ್ತು. ಆ ಪರಮನಿಷ್ಕಲವೇ ಶ್ರೀಗುರು, ಸಕಲವೇ ಲಿಂಗ, ಸಕಲನಿಷ್ಕಲವೇ ಜಂಗಮ. ಅದೆಂತೆಂದಡೆ: `ಏಕಮೂರ್ತಿಸ್ತ್ರೀಧಾ ಭೇದಾ ಗುರುರ್ಲಿಂಗಂತು ಜಂಗಮ' ಎಂದುದಾಗಿ, ಆ ಜಂಗಮಪ್ರಸಾದವೆ ಮೂಲವಾದ ಕಾರಣ, ಆ ಜಂಗಮವನಾರಾಧಿಸಿ, ಅನಂತ ಪ್ರಮಥಗಣಂಗಳು ಪ್ರಸಾದವ ಪಡೆದು, ತಮ್ಮ ಸದ್ಭಾವವೆಂತಂತೆ ಸ್ವೀಕರಿಸಿದ ಕಾರಣ, ಅನಂತಮುಖವಾಯಿತ್ತು. ಅವೆಲ್ಲವನೊಳಕೊಂಡು ತಾನೆ ನಿಂದ ಕಾರಣ ಎಂದಿನಂತಾಯಿತ್ತು. ಇದೇ ಪ್ರಸಾದದಾದಿ ಮಧ್ಯಾಂತದರಿವು ಕಾಣಿರೆ. ಇಂತಪ್ಪ ಪ್ರಸಾದವ ಕೊಂಬ ಪ್ರಸಾದಿಯ ನಿಲವೆಂತೆಂದಡೆ : ವಿಶ್ವಾಸವೆ ಒಡಲಾಗಿ, ಲಿಂಗನಿಷ್ಠೆಯೆ ಇಂದ್ರಿಯಂಗಳಾಗಿ, ಸಾವಧಾನವೆ ಕರಣಂಗಳಾಗಿ, ಶಿವಾನುಭಾವವೆ ಪ್ರಾಣವಾಗಿ, ಮಹದಾನಂದವೆ ತಾನಾಗಿ, ಲಿಂಗಸಮರಸವೆ ಭರಿತವಾಗಿರ್ಪ ಮಹಾಜ್ಞಾನಿಯೆ ಪ್ರಸಾದಿ. ಆ ಪ್ರಸಾದಿಯ ಪ್ರಸಾದವೆ ಎನ್ನ ಲಿಂಗಕ್ಕೆ ಕಳೆಯಾಯಿತ್ತು. ಅದೆ ಎನಗೆ ತಿಳಿವಾಯಿತ್ತು, ಮಹಾಲಿಂಗ ಕಲ್ಲೇಶ್ವರಾ.