Index   ವಚನ - 78    Search  
 
ಭಾಜನದಲ್ಲಿ ಅಳವಟ್ಟು, ಗಡನಿಸಿದ, ಪದಾರ್ಥಂಗಳ ರೂಪ ತನ್ನ ಕರಣಂಗಳಲ್ಲಿ ಅವಧಾನ ನಿರೀಕ್ಷಣೆಯಿಂದ ನಿರೀಕ್ಷಿಸಿ, ಲಿಂಗಾವಧಾನ ನಿರೀಕ್ಷಣೆಯಿಂದ ನಿರೀಕ್ಷಿಸಿ, ಆ ಪದಾರ್ಥವನು ಲಿಂಗತನುವಿನ ಕರದಿಂದ ಮುಟ್ಟಿ, ಪದಾರ್ಥದ ಮೃದು ಕಠಿಣ ಶೀತ ಉಷ್ಣಂಗಳ ಸೋಂಕನು ಇಷ್ಟಲಿಂಗ ಮುಖದಲ್ಲಿ ಅರ್ಪಿಸಿ, ರೂಪವರ್ಪಿಸುವಡೆ ಇಷ್ಟಲಿಂಗಾರ್ಪಿತ. ಆ ಇಷ್ಟಲಿಂಗಮುಖದಿಂದರ್ಪಿತವಾದ ರೂಪಪ್ರಸಾದವನು ರುಚಿಕರದಿಂದ ಪದಾರ್ಥಮಂ ಮಾಡಿ, ಜಿಹ್ವೆಯೆಂಬ ಭಾಜನದಲ್ಲಿ ಮಧುರ ಆಮ್ಲ ಲವಣ ಕಟು ಕಷಾಯ ತಿಕ್ತವೆಂಬ ಷಡ್ವಿಧ ರುಚಿಯನು ಲಿಂಗಾವಧಾನ ಮನದಿಂದ ಜಿಹ್ವೆಯ ಚೈತನ್ಯವರಿದು, ಹೃದಯಕಮಲಪೀಠಿಕೆಯಲ್ಲಿಹ ಪ್ರಾಣೇಶ್ವರನಾದ ಪ್ರಾಣಲಿಂಗಕ್ಕೆ ಕರಣಂಗಳು ಒಮ್ಮುಖವಾಗಿ ಅರ್ಪಿಸುವೊಡೆ ರುಚ್ಯರ್ಪಿತ. ಆ ರುಚಿಪ್ರಸಾದವನು ಪರಿಣಾಮ ಭಾಜನದಲ್ಲಿ ಸಾವಧಾನ ಸಮರಸದಿಂದರ್ಪಿಸುವಲ್ಲಿ ತೃಪ್ತಿ ಲಿಂಗಮುಖದಿಂದ ತೃಪ್ತಿಪ್ರಸಾದಿ. ರೂಪಂ ಸಮರ್ಪಯೇ ಲಿಂಗೇ ರುಚಿಮಪ್ಯರ್ಪಯೇತ್ತಥಾ | ಉಭಯಾರ್ಪಣ ಹೀನಶ್ಯ ಪ್ರಸಾದೋ ನಿಷ್ಫಲೋ ಭವೇತ್ || ಇಂತೆಂದುದಾಗಿ,ಇದು ಕಾರಣ, ಪ್ರಸಾದದಾದಿ ಕುಳವ ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರೆ ಬಲ್ಲರು.