Index   ವಚನ - 95    Search  
 
ಶಿವ ತನ್ನ ನಿಜರೂಪವನು ಸದ್ಭಕ್ತರಿಗಲ್ಲದೆ ತೋರನೆಂಬುದು ವೇದ. ಆ ಸದ್ಭಕ್ತನೆ ಬ್ರಾಹ್ಮಣ, ಆ ಸದ್ಭಕ್ತನೆ ಸತ್ಕುಲಜ, ಆ ಸದ್ಭಕ್ತನೆ ಎನಗಿಂದಧಿಕನೆಂದು ಶ್ರೀರುದ್ರವೇದ ಬೊಬ್ಬಿಡುತ್ತಿದೆ. ಯಾತೇ ರುದ್ರ ಶಿವ ತನೂರಘೋರಾ ಪಾಪಕಾಶಿನೀ | ತಯಾನಸ್ತನುವಾ ಶಂತಮಯಾ ಗಿರೀಶಂ ತಾಭಿ ಚಾಕಶೀಃ || ಎಂದುದಾಗಿ, ಶಿವಲಿಂಗಭಕ್ತನಲ್ಲದೆ ಅತಃಪರವೊಂದು ಇಲ್ಲ ಕೇಳಿಭೋ. ನಿಮ್ಮ ಮನದೊಳಗೆ ಯಜುರ್ವೇದ ಶ್ರುತಿಯ ವಿಚಾರಿಸಿ ನೋಡಿರಣ್ಣಾ. ಓಂ ಸಪದಸ್ತ್ರೈದ್ರ್ಯಾವಾ ಭೂಮೀ ಜನಯನ್ ದೇವಃ ಎಂದುದಾಗಿ, ಶೈವಪುರಾಣೇ: ಯಥಾ ಪಂಕೇ ಸರೋಜಂ ಚ ಯಥಾ ಕಾಷ್ಟೇ ಹುತಾಶನಃ | ಸುಪ್ರತಿಷ್ಠಿತಲಿಂಗೇ ತು ನಯಥಾ ಪೂರ್ವಭಾವನಂ || ಮತ್ತಂ ಲೈಂಗೇ: ಶಿವದೀಕ್ಷಾಭಿಜಾತಸ್ಯ ಪೂರ್ವಜಾತಿಂ ನ ಚಿಂತಯೇತ್ | ಯಥಾ ಸುವರ್ಣಪಾಷಾಣೇ ಭಕಶ್ಚಂಡಾಲವಂಶಜಃ || ಇಂತೆಂದು ಪುರಾಣವಾಕ್ಯಂಗಳು ಸಾರುತ್ತಿವೆ. ಶಿವಲಿಂಗಬಕ್ತನೇ ಶ್ರೇಷ್ಠನು. ಶ್ವಪಚನಾದಡೆಯೂ ಆ ಲಿಂಗಭಕ್ತನೇ ಕುಲಜನು, ಆ ಲಿಂಗಭಕ್ನೇ ಉತ್ತಮನಯ್ಯ, ಮಹಾಲಿಂಗಕಲ್ಲೇಶ್ವರಾ.