Index   ವಚನ - 96    Search  
 
ಶುಚಿಗಳು ಶುದ್ಧಾತ್ಮರೆಂಬರು ನಾವಿದನರಿಯೆವಯ್ಯಾ. ಕಾಯವಿಡಿದು ಶುಚಿ ಶುದ್ಧಾತ್ಮನೊ? ಜೀವವಿಡಿದು[ಶುಚಿ] ಶುದ್ಧಾತ್ಮನೊ? ಅವುದವಿಡಿದು ಶುಚಿ ಶುದ್ಧಾತ್ಮನು ಹೇಳಿರೆ! ಕಾಯದ ಮಲವ ತೊಳೆದು ಶುದ್ಧವ ಮಾಡಬಲ್ಲಡೆ, ಕಾಯ ಸಕಾಯ ನೋಡಿರೆ! ಜೀವನ ಮಲವ ಕಳೆದು ಜೀವನ ಶುದ್ಧವ ಮಾಡಬಲ್ಲಡೆ, ಜೀವನ ಶುದ್ಧಾತ್ಮನು ಕೇಳಿರೆ! ಅಂತರಂಗಕ್ಕೆ ಭಾವ ಮನ ನಿರ್ಮಲ ಶುದ್ಧಿ. ಬಹಿರಂಗಕ್ಕೆ ತನು ಕರಣುಂಗಳಳಿದುದೆ ಶುದ್ಧಿ ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರು ಒಳಗೂ ಹೊರಗೂ ಸರ್ವಾಂಗಲಿಂಗವಾಗಿ, ಸರ್ವಶುಚಿ ಶುದ್ಧಾತ್ಮರು ಕೇಳಿರೆ!