Index   ವಚನ - 97    Search  
 
ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವಲ್ಲಿ, ಲಿಂಗಕ್ಕೆ ಅರ್ಚನೆ ಪೂಜೆಗಳನು ಮಾಡಿ, ಲಿಂಗಾರ್ಪಿತದಲ್ಲಿ ಅವಧಾನಪ್ರಸಾದ, ಭೋಗದಲ್ಲಿ ಸುಯಿಧಾನ, ಗುರುವಿನಲ್ಲಿ ಜ್ಞಾನಸಿದ್ಧಿ, ಜಂಗಮದಲ್ಲಿ ನಿರ್ವಂಚನೆ, ಪ್ರೀತಿ ಪ್ರೇಮ ಪರಧನ ಪರಸ್ತ್ರೀ ಪರದೈವಕ್ಕೆರಗದೆ, ನಿತ್ಯಲಿಂಗಾರ್ಚನೆಯು ಮಾಡೆಂದು ಉಪದೇಶಮಂ ಕೊಟ್ಟನಲ್ಲದೆ, ಪಾದತೀರ್ಥದಲ್ಲಿ ಲಿಂಗಮಜ್ಜನಕ್ಕೆರೆದು ಪ್ರಸಾದವನರ್ಪಿಸ ಹೇಳಿಕೊಟ್ಟನೆ, ಇಲ್ಲ. ಆ ಭಕ್ತನು ತನು ಮನ ಧನವನು ಗುರುಲಿಂಗಜಂಗಮಕ್ಕೆ ಸವೆಸಿ, ತನು ಸವೆಸಿ ಮನಲೀಯವಾಗಿ ಧನಲೋಭವಿಲ್ಲದೆ ಸಂದು ನಿಂದ, ಪರಮವೈರಾಗ್ಯ ಉರವಣಿಸಿ ಈಷಣತ್ರಯದ ಆಸೆಯಳಿದು, ಸೋಹಂ ಎಂದು ನಿಂದು ಹರಗಣಂಗಳಂ ನೆರಪಿ, ಆಚಾರ ಕರ್ಪರ, ವಿಚಾರ ಕರ್ಪರ, ಅವಿಚಾರ ಕರ್ಪರ ವೇಷಮಂ ತಾಳಿ, ಭಕ್ತ ಭಿಕ್ಷಾಂದೇಹಿ ಎಂದು ಭಕ್ತರ ಮಠದಲ್ಲಿ ಹೊಕ್ಕು, ಲಿಂಗಾರ್ಚನೆಯಂ ಮಾಡಿ, ಲಿಂಗಪ್ರಸಾದಮಂ ಭೋಗಿಸಿ, ಶಿವಕ್ಷೇತ್ರ ತೀರ್ಥಂಗಳಂ ಚರಿಸಿ, ಲಿಂಗಧ್ಯಾನ ನಿರತನಾಗಿ ಇರಹೇಳಿದರಲ್ಲದೆ, ಲಿಂಗಕ್ಕೆ ಪಾದತೀರ್ಥವ ಕೊಟ್ಟು, ಪ್ರಸಾದವನಿಕ್ಕ ಹೇಳೆ ಮಾಡಿದ ನಿರ್ವಾಣದೀಕ್ಷೆಯುಂಟೆ? ಸಲಿಂಗೀ ಪ್ರಾಣಮುಕ್ತಶ್ಚ ಮನೋಮುಕ್ತಶ್ಚ ಜಂಗಮಃ | ಪ್ರಸಾದೀ ಕಾಯಮುಕ್ತಶ್ಚ ತ್ರಿವಿಧಸ್ತತ್ವನಿರ್ಣಯಃ || ಇಂತೆಂದುದಾಗಿ, ಈ ನಿರ್ಣಯ ವಚನವನರಿಯಬಲ್ಲಡೆ ಜಂಗಮ, ಅಲ್ಲದಿದ್ದಡೆ ಭವಭಾರಿಯೆಂಬೆ, ಮಹಾಲಿಂಗ ಕಲ್ಲೇಶ್ವರಾ.