Index   ವಚನ - 98    Search  
 
ಶ್ರೀಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ, ಹಸ್ತಮಸ್ತಕಸಂಯೋಗಕಾಲದಲ್ಲಿ, ಪಂಚಕಳಶದ ನಿರ್ಮಲಜಲವ ತನ್ನ ಕರುಣಜಲವ ಮಾಡಿ, ಆತನ ಜನ್ಮದ ಮೇಲಿಗೆಯ ಕಳೆಯಲು, ತಾ ನಿರ್ಮಲನಾಗಿ ಲಿಂಗವ ಗ್ರಹಿಸಿದಲ್ಲಿ, ಲಿಂಗಕ್ಕೆ ಮಜ್ಜನಕ್ಕೆರೆಯತೊಡಗಿ, ಮಜ್ಜನೋದಕವನರಿದೆ. ಲಿಂಗಸ್ಪರುಶನದಿಂದ ಪಾದೋದಕವನರಿದೆ. ಲಿಂಗಾರ್ಪಿತ ಭೋಗೋಪಭೋಗದಲ್ಲಿ ಅರ್ಪಿತ ಪ್ರಸಾದೋದಕವನರಿದೆ. ಅರಿದು, ಅನ್ಯೋದಕವ ಮರದು, ನಿಮ್ಮಲ್ಲಿ ತದ್ಗತನಾಗಿರ್ದೆನಯ್ಯಾ, ಮಹಾಲಿಂಗ ಕಲ್ಲೇಶ್ವರಾ.