ಪಿಂಡ ಬ್ರಹ್ಮಾಂಡವ ಒಂದು ಮಾಡಿ ನಿರ್ಮಿಸಿದ
ಶಿವನ ಕಂಡವರುಂಟೇ? ಹೇಳಿರೆ !
ಕಂಡವರುಂಟು, ಅದು ಹೇಗೆಂದಡೆ:
ಶಿಲೆಯೊಳಗಣ ಪಾವಕನಂತೆ,
ತಿಲದೊಳಗಣ ತೈಲದಂತೆ,
ಬೀಜದೊಳಗಣ ವೃಕ್ಷದಂತೆ,
ಉದಕದೊಳಗಣ ಪ್ರತಿಬಿಂಬದಂತೆ,
ಹಸುವಿನೊಳಗಣ ಘೃತದಂತೆ ಇದ್ದಿತ್ತು
ಆ ಪರಬ್ರಹ್ಮದ ನಿಲವು.
ಇದ್ದರೇನು, ಕಾಣಬಹುದೇ? ಕಾಣಬಾರದು.
ಕಾಣುವ ಬಗೆ ಹೇಗೆಂದರೆ ಹೇಳುವೆ ಕೇಳಿರಣ್ಣಾ:
ಶಿಲೆಯೊಳಗಣ ಅಗ್ನಿ
ಚಕಿಮಕಿ ದೂದಿವಿಡಿದು ಕ್ರೀಯಿಟ್ಟು
ಮಾಡಿದಲ್ಲದೆ ಪ್ರಜ್ವಲಿಸದು.
ತಿಲದೊಳಗಣ ತೈಲ
ಯಂತ್ರದಲ್ಲಿ ಕ್ರೀಡಿಸಿದಲ್ಲದೆ ತೋರದು.
ಬೀಜದೊಳಗಣ ವೃಕ್ಷ
ಮೇಘದ ದೆಸೆಯಲ್ಲಿ ಪಸಿಯಕ್ಷೇತ್ರಕ್ಕೆ
ಬಿದ್ದಲ್ಲದೆ ಮೊಳೆದೋರದು.
ಪಶುವಿನೊಳಗಣ ಘೃತ
ಪಶುವ ಬೋಧಿಸಿ ಕ್ರೀಯಿಟ್ಟು ಅಮೃತ ಕರೆದರೆ ಕೊಡುವುದು.
ಮೇಘದ ದೆಸೆಯಲಿ ಉದಕ ಬಂದು ಎಲೆಯ ತುಂಬಿದರೆ
ಸೂರ್ಯನ ಪ್ರತಿಬಿಂಬವದರೊಳು ತೋರುವಂತೆ,
ನಾದ ಬಿಂದು ಕಳೆಯ ದೆಸೆಯಲಿ ಪಿಂಡವಾಯಿತ್ತು.
ಆ ಪಿಂಡದೊಳಗಣ ಜೀವ ಶಿವಚೈತನ್ಯ.
ಅದು ಹೇಗೆಂದಡೆ, ಅದಕ್ಕೆ ಸಾಕ್ಷಿ:
``ಶಿವೋ ಜೀವಃ ಜೀವಂ ಶಿವಃ
ಸ ಜೀವಃ ಕೇವಲಂ ಶಿವಃ''
ಎಂದುದಾಗಿ,
ಪಿಂಡ ಬ್ರಹ್ಮಾಂಡದೊಳಗಣ ಶಿವನಿಲವು ಇಂತಿದ್ದಿತ್ತು.
ಇದ್ದರೇನು? ಲೋಕದ ಜಡದೇಹಿಗಳಿಗೆ ಕಾಣಬಾರದು.
ಆದಿಯಲ್ಲಿ ಶಿವಬೀಜವಾದ ಮಹಿಮರಿಗೆ ತೋರುವುದು.
ಉಳಿದವರಿಗೆ ಸಾಧ್ಯವೇ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Piṇḍa brahmāṇḍava ondu māḍi nirmisida
śivana kaṇḍavaruṇṭē? Hēḷire!
Kaṇḍavaruṇṭu, adu hēgendaḍe:
Śileyoḷagaṇa pāvakanante,
tiladoḷagaṇa tailadante,
bījadoḷagaṇa vr̥kṣadante,
udakadoḷagaṇa pratibimbadante,
hasuvinoḷagaṇa ghr̥tadante iddittu
ā parabrahmada nilavu.
Iddarēnu, kāṇabahudē? Kāṇabāradu.
Kāṇuva bage hēgendare hēḷuve kēḷiraṇṇā:
Śileyoḷagaṇa agniCakimaki dūdiviḍidu krīyiṭṭu
māḍidallade prajvalisadu.
Tiladoḷagaṇa taila
yantradalli krīḍisidallade tōradu.
Bījadoḷagaṇa vr̥kṣa
mēghada deseyalli pasiyakṣētrakke
biddallade moḷedōradu.
Paśuvinoḷagaṇa ghr̥ta
paśuva bōdhisi krīyiṭṭu amr̥ta karedare koḍuvudu.
Mēghada deseyali udaka bandu eleya tumbidare
sūryana pratibimbavadaroḷu tōruvante,
Nāda bindu kaḷeya deseyali piṇḍavāyittu.
Ā piṇḍadoḷagaṇa jīva śivacaitan'ya.
Adu hēgendaḍe, adakke sākṣi:
``Śivō jīvaḥ jīvaṁ śivaḥ
sa jīvaḥ kēvalaṁ śivaḥ''
endudāgi,
piṇḍa brahmāṇḍadoḷagaṇa śivanilavu intiddittu.
Iddarēnu? Lōkada jaḍadēhigaḷige kāṇabāradu.
Ādiyalli śivabījavāda mahimarige tōruvudu.
Uḷidavarige sādhyavē,
paramaguru paḍuviḍi sid'dhamallināthaprabhuve.