Index   ವಚನ - 44    Search  
 
ಘಟ್ಟಬೆಟ್ಟದ ನಟ್ಟನಡುವಿನ ಗಿರಿಯಲ್ಲಿ ಹುಟ್ಟಿತೊಂದು ಸೋಜಿಗದಗ್ನಿಯ ಕಳೆ. ಆ ಕಳೆಯ ಬೆಳಗ ಕಾಣೆನೆಂದು ಇಬ್ಬರು ಮುಂದುಗೆಟ್ಟರು, ಮೂವರು ತಾಮಸಕ್ಕೊಳಗಾದರು, ನಾಲ್ವರು ನಡೆಗೆಟ್ಟರು, ಐವರು ಅಂಧಕರಾದರು, ಆರುಮಂದಿ ಹೋರಾಟಗೊಳುತಿರೆ, ಏಳುಮಂದಿ ಕೂಪವ ಬಿದ್ದರು, ಎಂಟುಮಂದಿ ತಂಟುಕಕ್ಕೆ ಒಳಗಾದರು. ಒಂಬತ್ತು [ಮಂದಿ] ಕಣವಿಯ ಹರವರಿಯಲ್ಲಿ [ಹೊಕ್ಕರು.] ಹತ್ತು ಬಗೆಯವರು ಹರಿದಾಡುತಿರೆ, ಇದನು ಕಂಡು, ತರುಗಿರಿಯ ನಡುವೆ ಹರಿವ ಉದಕ ಗಾಳಿ ಬಂದು ಬೆಟ್ಟವನಡರಿ, ಉರಿವ ಜ್ಯೋತಿಯ ತಾಗದ ಮುನ್ನ ನೀರಹರಿಯನಡ್ಡಂಗಟ್ಟಿ, ಗಾಳಿಯ ಹಿಮ್ಮೆಟ್ಟಿಸಿ, ಜ್ಞಾನಪರಬ್ರಹ್ಮದಲ್ಲಿ ನಿಂದವರಾರೆಂದರೆ: ಪ್ರಭುದೇವರು, ಚೆನ್ನಬಸವೇಶ್ವರದೇವರು, ಮೋಳಿಗೆಯ್ಯನವರು, ಸಂಗನಬಸವೇಶ್ವರದೇವರು, ನೀಲಾಂಬಿಕೆ ತಾಯಿ, ಅಕ್ಕನಾಗಮ್ಮ, ಮಹಾದೇವಿಯಕ್ಕ, ಮುಕ್ತಾಯಿ ಮುಖ್ಯವಾದ ಏಳುನೂರಾ ಎಪ್ಪತ್ತು ಅಮರಗಣಂಗಳ ಲೆಂಕರ ಲೆಂಕನಾಗಿ ಎನ್ನ ಆದಿಪಿಂಡಿವ ಧರಿಸಿ, ಮರ್ತ್ಯಕ್ಕೆ ಕಳುಹಿದ ಭೇದವ ಪಿಂಡಜ್ಞಾನದಿಂದಲರಿದು ಆಚರಿಸುತ್ತಿದ್ದೆನಯ್ಯಾ ಎನ್ನಾಳ್ದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.