ಅನ್ಯದೇಹಿಯೆಂದು ಎನ್ನ ಕಳೆಯದಿರು,
ಕರ್ಮದೇಹಿಯೆಂದು ಕೈಯ ಬಿಡದಿರು,
ಮರ್ತ್ಯನೆಂದು ಮಾಯಕ್ಕೆ ಗುರಿಮಾಡದಿರು,
ಮದಡನೆಂದು ಮನವಿಕಾರಕ್ಕೆ ಗುರಿಮಾಡದಿರು,
ಅಜ್ಞಾನಿಯೆಂದು ಅಹಂಕಾರಕ್ಕೆ ಗುರಿಮಾಡದಿರು,
ಮದದೇಹಿಯೆಂದು ಮಾಯಾತಮಂಧಕ್ಕೆ ಗುರಿಮಾಡದಿರು,
ಜಲ ಅಗ್ನಿಯ ಗುಣವಿರಲೊ ಎನ್ನಯ್ಯ.
ಅದು ಎಂತೆಂದೊಡೆ:
ಜಲ ಹರಿವೆಡೆಯಲ್ಲಿ ಹೊಲಗೇರಿ ಉತ್ತಮಗೇರಿ
ಅಮೇಧ್ಯದಗೇರಿಯೆಂದು ನೋಡಿ ಹರಿವುದೆ?
ಹರಿಯದು; ಅದಕ್ಕೆಲ್ಲ ಸಮ.
ಅಗ್ನಿ ಶ್ವಪಚರ ಮನೆ, ಗೃಹಸ್ಥರ ಮನೆ, ಬೇಡ ಮಾದಿಗ
ಹದಿನೆಂಟು ಜಾತಿ ಎಂದು
ಅಡಿಯಿಡಲು ಮುನಿವುದೆ? ಮುನಿಯದು.
ಎನ್ನ ಅನ್ಯದೇಹಿಯೆಂದು, ಕರ್ಮದೇಹಿಯೆಂದು,
ಮರ್ತ್ಯದೇಹಿಯೆಂದು, ಮದಡದೇಹಿಯೆಂದು,
ಅಜ್ಞಾನಿಯೆಂದು ಕಳೆದಡೆ ಹುರುಳಿಲ್ಲ.
ಅತ್ತಿಯಹಣ್ಣು ಬಿಚ್ಚಿದರೆ ಬಲು ಹುಳು.
ಎನ್ನ ಚಿತ್ತದೊಳವಗುಣವ ವಿಸ್ತರಿಸಿದರೇನು? ಫಲವಿಲ್ಲ.
ನೋಡದೆ ಕಾಡದೆ ಮಾಯಾತಮವ
ಕಳೆದು ಜ್ಞಾನಜ್ಯೋತಿಯ ತೀವು.
ಎನ್ನ ನಿಮ್ಮಯ ಶರಣರು
ಚೆನ್ನಬಸವಣ್ಣ ಅಕ್ಕನಾಗಮ್ಮ ನೀಲಲೋಚನೆ ನಿಂಬವ್ವೆ
ಮಹಾದೇವಿ ಮುಕ್ತಾಯಕ್ಕ ಅಜಗಣ್ಣ ಅಂಬಿಗರ ಚೌಡಯ್ಯ
ಕಲಿಕೇತಯ್ಯ ಬ್ರಹ್ಮಯ್ಯ ನಿರ್ಲಜ್ಜಶಾಂತಯ್ಯ
ನಿಜಗುಣದೇವರು ಸಿದ್ಧರಾಮಿತಂದೆ
ಮರುಳಶಂಕರದೇವರು ಕಿನ್ನರಿಬ್ರಹ್ಮಯ್ಯ
ವೀರಗಂಟೆಯ ಮಡಿವಾಳಯ್ಯ ಮೇದರ ಕೇತಯ್ಯಗಳು
ಅರವತ್ತುಮೂವರು ಪುರಾತನರು ತೇರಸರು
ಷೋಡಶರು ದಶಗಣರು ಮುಖ್ಯವಾದೇಳನೂರಾ ಎಪ್ಪತ್ತು
ಅಮರಗಣಂಗಳ
ಆಳಿನಾಳಿನಾ ಮನೆಯ ಕೀಳಾಳ ಮಾಡಿ
ಅವರ ಲೆಂಕನಾಗಿ, ಅವರುಟ್ಟ ಮೈಲಿಗೆ, ಉಗುಳ್ದ ತಾಂಬೂಲ
ಪಾದೋದಕ, ಅವರೊಕ್ಕ ಪ್ರಸಾದಕೆನ್ನ ಯೋಗ್ಯನಮಾಡೆ
ಏಳೇಳು ಜನ್ಮದಲ್ಲಿ ಬರುವೆ ಕಂಡಾ,
ಭವವಿರಹಿತ ತಂದೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
An'yadēhiyendu enna kaḷeyadiru,
karmadēhiyendu kaiya biḍadiru,
martyanendu māyakke gurimāḍadiru,
madaḍanendu manavikārakke gurimāḍadiru,
ajñāniyendu ahaṅkārakke gurimāḍadiru,
madadēhiyendu māyātamandhakke gurimāḍadiru,
jala agniya guṇaviralo ennayya.
Adu entendoḍe:
Jala hariveḍeyalli holagēri uttamagēri
amēdhyadagēriyendu nōḍi harivude?
Hariyadu; adakkella sama.
Agni śvapacara mane, gr̥hasthara mane, bēḍa mādiga
hadineṇṭu jāti endu
aḍiyiḍalu munivude? Muniyadu.
Enna an'yadēhiyendu, karmadēhiyendu,
martyadēhiyendu, madaḍadēhiyendu,
ajñāniyendu kaḷedaḍe huruḷilla.
Attiyahaṇṇu biccidare balu huḷu.
Enna cittadoḷavaguṇava vistarisidarēnu? Phalavilla.
Nōḍade kāḍade māyātamava
kaḷedu jñānajyōtiya tīvu.
Enna nim'maya śaraṇaru
cennabasavaṇṇa akkanāgam'ma nīlalōcane nimbavve
mahādēvi muktāyakka ajagaṇṇa ambigara cauḍayya
Kalikētayya brahmayya nirlajjaśāntayya
nijaguṇadēvaru sid'dharāmitande
maruḷaśaṅkaradēvaru kinnaribrahmayya
vīragaṇṭeya maḍivāḷayya mēdara kētayyagaḷu
aravattumūvaru purātanaru tērasaru
ṣōḍaśaru daśagaṇaru mukhyavādēḷanūrā eppattu
amaragaṇaṅgaḷa
āḷināḷinā maneya kīḷāḷa māḍi
avara leṅkanāgi, avaruṭṭa mailige, uguḷda tāmbūla
pādōdaka, avarokka prasādakenna yōgyanamāḍe
ēḷēḷu janmadalli baruve kaṇḍā,
bhavavirahita tande
paramaguru paḍuviḍi sid'dhamallināthaprabhuve.
ಸ್ಥಲ -
ಮಾಯಾತಮಂಧ ನಿರಸನಸ್ಥಲ