Index   ವಚನ - 82    Search  
 
ದಶವಾಯುಗಳು ಅವಾವೆಂದಡೆ ಹೇಳುವ ಕೇಳಿರಣ್ಣಾ: ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುಗಳು. ಇವರ ಗುಣಧರ್ಮಕರ್ಮವೆಂತೆಂದಡೆ, ಅದಕ್ಕೆ ವಿವರ: ಪ್ರಾಣವಾಯು ಇಂದ್ರನೀಲವರ್ಣ, ಹೃದಯಸ್ಥಾನದಲ್ಲಿದ್ದು ಅಂಗುಷ್ಠ ತೊಡಗಿ ಪ್ರಾಣಾಗ್ರಪರಿಯಂತರದಲು ಸಪ್ರಾಣಿಸಿಕೊಂಡು ಉಚ್ಛ್ವಾಸ ನಿಶ್ವಾಸಮನೈದು ಅನ್ನ ಜೀರ್ಣಕಾರವಂ ಮಾಡಿಸುತ್ತಿಹುದು. ಅಪಾನವಾಯು ಹರಿತವರ್ಣ, ಗುದಸ್ಥಾನದಲ್ಲಿದ್ದು ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ ಅಧೋದ್ವಾರಮಂ ಬಲಿದು ಅನ್ನರಸವ್ಯಾಪ್ತಿಯಂ ಮಾಡಿಸುತ್ತಿಹುದು. ವ್ಯಾನವಾಯು ಗೋಕ್ಷೀರವರ್ಣ, ಸರ್ವಸಂಧಿಯಲ್ಲಿದ್ದು ನೀಡಿಕೊಂಡಿದ್ದುದ ಅನುವಂ ಮಾಡಿಸಿ ಅನ್ನಪಾನವ ತುಂಬಿಸುತ್ತಿಹುದು. ಉದಾನವಾಯು ಎಳೆಮಿಂಚಿನವರ್ಣ, ಕಂಠಸ್ಥಾನದಲ್ಲಿದ್ದು ಸೀನುವ, ಕೆಮ್ಮುವ, ಕನಸುಕಾಣುವ, ಏಳಿಸುವ ಕಾರ್ಯಗೈದು ವರ್ಧಿಸಿ ರೋಧನಂಗಳಂ ಮಾಡಿಸಿ ಅನ್ನರಸ ಆಹಾರ ಸ್ಥಾಪನಂಗೈಸುತ್ತಿಹುದು. ಸಮಾನವಾಯು ನೀಲವರ್ಣ, ನಾಭಿಸ್ಥಾನದಲ್ಲಿದ್ದು ಅಪಾದಮಸ್ತಕ ಪರಿಯಂತರದಲ್ಲು ಸಪ್ರಾಣಿಸಿಕೊಂಡು ಇದ್ದಂಥ ಅನ್ನರಸವನು ಎಲ್ಲ ರೋಮನಾಳಂಗಳಿಗೆ ಹಂಚಿಹಾಕುತ್ತಿಹುದು. ಇಂತಿವು ಪ್ರಾಣಪಂಚಕವು. ಇನ್ನು ನಾಗವಾಯು ಪೀತವರ್ಣ, ರೋಮನಾಳಂಗಳಲ್ಲಿದ್ದು ಚಲನೆಯಿಲ್ಲದೆ ಹಾಡಿಸುತ್ತಿಹುದು. ಕೂರ್ಮವಾಯು ಶ್ವೇತವರ್ಣ, ಉದರ ಲಲಾಟದಲ್ಲಿದ್ದು ಶರೀರಮಂ ತಾಳ್ದು ದೇಹಮಂ ಪುಷ್ಟಿಯಂ ಮಾಡಿಕೊಂಡು ಬಾಯ ಮುಚ್ಚುತ್ತ ತೆರೆಯುತ್ತ ನಯನದಲ್ಲಿ ಉನ್ಮೀಲನಮಂ ಮಾಡಿಸುತ್ತಿಹುದು. ಕೃಕರವಾಯು ಅಂಜನವರ್ಣ, ನಾಶಿಕಾಗ್ರದಲ್ಲಿದ್ದು ಕ್ಷುಧಾದಿ ಧರ್ಮಂಗಳಂ ನೆಗಳಿಸಿ ಗಮನಾಗಮನಂಗಳಂ ಮಾಡಿಸುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ, ಗುಹ್ಯ ಕಟಿಸ್ಥಾನದಲ್ಲಿದ್ದು ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿದ್ದಲ್ಲಿ ಏಳಿಸಿ, ಚೇತರಿಸಿ, ಒರಲಿಸಿ, ಮಾತಾಡಿಸುತ್ತಲಿಹುದು. ಧನಂಜಯವಾಯು ನೀಲವರ್ಣ, ಬ್ರಹ್ಮರಂಧ್ರಸ್ಥಾನದಲ್ಲಿದ್ದು ಕರ್ಣದಲ್ಲಿ ಸಮುದ್ರಘೋಷವಂ ಘೋಷಿಸುತ್ತಿಹುದು. ಮರಣಕಾಲಕ್ಕೆ ನಿರ್ಘೋಷಮಪ್ಪುದು. ಇಂತಿವು ದಶವಾಯುಗಳು. ನಿನ್ನ ಕಟ್ಟಳೆಯಿಲ್ಲದೆ ಅಂಗದೊಳು ಚರಿಸ್ಯಾಡಲು ಈ ದಶವಾಯುಗಳಿಗಳವಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.