Index   ವಚನ - 95    Search  
 
ಛಲಮದವೆಂಬುದು ತಲೆಗೇರಿ ಗುರುಹಿರಿಯರ ನೆಲೆಯನರಿಯದೆ ಮದಿಸಿಪ್ಪರಯ್ಯ. ರೂಪಮದ ತಲೆಗೇರಿ ಮುಂದುಗೊಂಡು ತಮ್ಮ ತನುವಿನ ರೂಪ ಚೆಲ್ವಿಕೆ ನೋಡಿ ಮರುಳಾಗಿ ಚಿದ್ರೂಪನ ನೆನವ ಮರೆದರಯ್ಯಾ. ಯವ್ವನಮದ ತಲೆಗೇರಿ ಮದಸೊಕ್ಕಿದಾನೆಯಂತೆ ಪ್ರಯಾಸಮತ್ತರಾಗಿ ಕಾಮನ ಬಲೆಯೊಳಗೆ ಸಿಲ್ಕಿ ಕಾಮಾರಿ ನೆನವ ಮರೆದರಯ್ಯಾ. ಧನಮದವೆಂಬುದು ತನುವಿನೊಳು ಇಂಬುಗೊಂಡು ಅರ್ಥಭಾಗ್ಯ ಕಾಡಿ ವ್ಯರ್ಥ ಸತ್ತಿತು ಲೋಕ. ವಿದ್ಯಾಮದವೆಂಬುದು ಬುದ್ಧಿಗೆಡಿಸಿ ನಾ ಬಲ್ಲವ ತಾ ಬಲ್ಲವನೆಂದು ತರ್ಕಿಸಿ ಪ್ರಳಯಕಿಳಿದರು. ರಾಜ್ಯಮದವೆದ್ದು ರಾಜ್ಯವನಾಡಿಸಿ ಬೇಡಿಸಿಕೊಂಡೆನೆಂದು ರಾಜರಾಜರು ಹತವಾದರು. ತಪಮದವೆದ್ದು ನಾ ತಪಸಿ ನಾ ಸಿದ್ಧ ನಾ ಯೋಗಿ ನನಗಾರು ಸರಿಯಿಲ್ಲವೆಂದು ಅಹಂಕಾರಕ್ಕೆ ಗುರಿಯಾಗಿ ಭವಕ್ಕೆ ಬಂದರು ಹಲಬರು. ಇಂತೀ ಅಷ್ಟಮದವೆಂಬ ಭ್ರಾಂತು[ವ] ತೊಲಗಿಸಿ ನಿಭ್ರಾಂತನಾಗಿರಬಲ್ಲರೆ ಶಿವಶರಣನೆಂಬೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.