ಹೊನ್ನು ಹೆಣ್ಣು ಮಣ್ಣಿನ ಮೇಲೆ ಮೋಹವಿಪ್ಪಂತೆ
ಗುರು ಲಿಂಗ ಜಂಗಮದ ಮೇಲೆ ಮೋಹವಿಲ್ಲ.
ಧನ ಧಾನ್ಯವ ಗಳಿಸುವಂತೆ
ಲಿಂಗ ಜಂಗಮ ಗಳಿಸಲರಿಯರು.
ಗುರು ಲಿಂಗ ಜಂಗಮ ಕಂಡರೆ, ವೈರಿಯ ಕಂಡಂತೆ ಕಾಣ್ಬರು.
ಮುಂದಕ್ಕೆ ಹೋಹ ಬಿಟ್ಟು, ಹೆದರಿಸಿ ಚೆದುರಿಸಿ
ನುಡಿದು ನಿಂದಿಸುವ ಪಾಪಿಯ ಕೊರಳಲ್ಲಿಪ್ಪುದು
ಶಿಲೆಯಲ್ಲದೆ ಲಿಂಗವಲ್ಲ.
ಅದು ಎಂತೆಂದೊಡೆ:
ಆಡಿನ ಕೊರಳಲ್ಲಿ ಮೊಲೆ ಇದ್ದರೇನು
ಅಮೃತವ ಕರೆಯಬಲ್ಲುದೆ? ಕರೆಯಲರಿಯದು.
ಕಡಿಯಲರಿಯದವ ಹಿಡಿದರೇನಾಯುಧವ?
ಮಡದಿ ಮಕ್ಕಳು, ಅರ್ಥಭಾಗ್ಯವ ನೆಚ್ಚಿಪ್ಪ ಪಾಪಿಗೆ
ಹೊನ್ನೆ ದೈವ, ಹೆಣ್ಣೆ ದೈವ, ಮಣ್ಣೆ ದೈವ.
ಅವನಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ
ಪಾದೋದಕವಿಲ್ಲ ಪ್ರಸಾದವಿಲ್ಲ ,
ನಿಮ್ಮ ಕೃಪೆಯೆಂಬುದು ಮುನ್ನವೆ ಇಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.