Index   ವಚನ - 139    Search  
 
ಹಳ್ಳ ಮೇರೆದಪ್ಪಿದರೆ ಇಳಿವುದು, ಹೊಳೆ ಮೇರೆದಪ್ಪಿದರೆ ಇಳಿವುದು, ಸಮುದ್ರ ಮೇರೆದಪ್ಪಿದರೆ ಇಳಿವುದು. ಮನ ಮೇರೆದಪ್ಪಿದರೆ ಏರಿ ಇಳಿದು ಕಾಡುತ್ತಿದೆ. ಅದು ಎಂತೆಂದರೆ: ಹಳ್ಳ ಮೇರೆದಪ್ಪಿದರೆ ಸಂಗಡ ಕಾಯಿಯಿಂದ ನಡೆವುದು. ಹೊಳೆ ಮೇರೆದಪ್ಪಿದರೆ ಹರುಗೋಲು ನಡೆವುದು. ಸಮುದ್ರ ಮೇರೆದಪ್ಪಿದರೆ ಭೈತ್ರ ನಡೆವುದು. ಮನ ಮೇರೆದಪ್ಪಿದರೆ ಎನ್ನ ಕೊಂಡು ಮುಳುಗಿತ್ತು. ಈ ಮನ ವೇದ ಶಾಸ್ತ್ರ ಆಗಮದ ಕಟ್ಟಳೆಗೆ ನಿಲ್ಲುವುದೆ ? ನಿಲ್ಲದು. ಓದುವುದು ಮನ, ಹೇಳುವುದು ಮನ, ಕೇಳುವುದು ಮನ, ಕೇಳಿ ನರಕಕ್ಕಿಳಿವುದು ಕೆಡುವುದು ಮನ. ಈ ಮನದಂದುಗದ ದಾಳಿಯಲ್ಲಿ ನೊಂದು ಬೆಂದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.