Index   ವಚನ - 140    Search  
 
ಉಳಿ ಬಾಚಿಂಗೆ ಹರಿಯದ ಕೊರಡು, ಕೊಡಲಿ ಕುಡುಗೋಲಿಂಗೆ ಹರಿವುದೆ? ಪುರಾತರ ವಚನಾಮೃತವೆಂಬ ಉಳಿಯಲ್ಲಿ ಕಡಿದು ಬಾಚಿಯಲ್ಲಿ ಕೆತ್ತಿದರೆ ನಾಚದೆ ಮನ? ವೇದಾಗಮವೆಂಬ ಕೊಡಲಿ ಕುಡುಗೋಲಿಂಗೆ ಹರಿವುದೆ? ಹರಿಯದು. ಕೊರಡುಮನ ಜರಡುಮನ ಜಾಳುಮನ ಹಾಳುಮನ ಕೋಳುಮನ ಕುಪಿತಮನ ಸರ್ವಚಾಂಡಾಲ ಮನದ ಮೇಳದ ಬಲೆಯೊಳು ಬಿದ್ದು ಭಂಗಬಡುತ್ತಿದ್ದೆನೈ ನಿರ್ಭಂಗ ನಿರ್ಲೇಪ ನಿಜಗುರು ನಿಶ್ಚಿಂತ ಸ್ವಯಂಭೂ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.