Index   ವಚನ - 186    Search  
 
ನಡೆಯಲಾರದ ಹೆಳವಂಗೆ ಅಂಧ ಹೆಂಡತಿ ದೊರೆತರೆ ನಡೆವುದೇನಯ್ಯಾ ಅವರ ಜೀ[ವಿ]ತರೂಪ? ನುಡಿಯಿಲ್ಲದ ಮೂಕಮಾನವಂಗೆ ಅರಸುಪಟ್ಟಬಂದರೆ, ಪ್ರಜೆ ಪರಿವಾರ ರಾಜ್ಯವ ನಡೆಸಿಕೊಳಬಲ್ಲನೇನಯ್ಯಾ? ಅಜ್ಞಾನಗುಣ ಮಾಯಕ ಹರಿವನಕ ಸುಜ್ಞಾನಸಂಸಾರವುಂಟೇನಯ್ಯಾ? ಜೀವನ ಬುದ್ಧಿಗುಣವುಳ್ಳನ್ನಕ ಪರಮಾತ್ಮನ ಬೋಧೆಗೆ ಹರಿಯೆ ಸ್ವಸ್ಥಿರ ಚಿತ್ತನಯ್ಯಾ! ಸಂಸಾರಮಾಯೆ ಪ್ರಾಣವಾಗಿಪ್ಪವರಿಗೆ ನಿಃಸಂಸಾರವುಂಟೇನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥ ಪ್ರಭುವೆ ?