Index   ವಚನ - 219    Search  
 
ಗುರುಶಿಷ್ಯ ಸಂಬಂಧಕೆ ಹೋರಾಡಿ, ಧರೆಯೆಲ್ಲ ಬಂಡಾದರು ನೋಡಾ. ಗುರುವಿನ ಭವವ ಶಿಷ್ಯನರಿಯ, ಶಿಷ್ಯನ ಭವವ ಗುರುವರಿಯ. ಜ್ಞಾನಹೀನ ಗುರುವಿಂಗೆ ಜ್ಞಾನಹೀನ ಶಿಷ್ಯನಾದರೆ ಅವರ ಪಾತಕಕೆ ಕಡೆ ಏನಯ್ಯಾ? ಸಾಕ್ಷಿ: ಜ್ಞಾನಹೀನಗುರೋ ಪ್ರಾಪ್ತಂ ಶಿಷ್ಯಜ್ಞಾನಂ ನ ಸಿದ್ಧತಿ | ಮೂಲಚ್ಛಿನ್ನೇ ಯಥಾವೃಕ್ಷೇ ಗಂಧಃ ಪುಷ್ಪಂ ಫಲಂ ತಥಾ ||'' ಎಂದುದಾಗಿ, ಹೀಗೆಂಬುದನರಿಯದೆ, ಹೊನ್ನು ವಸ್ತ್ರದಾಸೆಗೆ ಲಿಂಗವ ಮಾರಿಕೊಂಡುಂಬ ಗುರು ಶಿವದ್ರೋಹಿ, ಲಿಂಗವ ಕೊಂಬ ಶಿಷ್ಯ ನರದ್ರೋಹಿ. ಇಂತಪ್ಪ ಗುರು ಶಿಷ್ಯ ಸಂಬಂಧವ ನೋಡಿ ನೋಡಿ ನಗುತಿದ್ದ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.