ಪಟ್ಟವ ಕಟ್ಟಿದ ಮೇಲೆ ಲಕ್ಷಣವನರಸಲುಂಟೇನಯ್ಯಾ?
ಕೊಡುಂಡು ಜಾತಿಭೇದವನರಸಲುಂಟೇನಯ್ಯಾ?
ಅನ್ಯಭವಿಗೆ ಲಿಂಗುಪದೇಶವ ಕೊಟ್ಚು,
ಅವನಲ್ಲುಣಬಾರದೆಂದು ಕುಲಕಂಜಿ, ಒಣ ಪಡಿಯ
ತಂದು, ಬೆರಸಿ ಪಾಕವ ಮಾಡಿ ಉಂಬ
ಅಜ್ಞಾನಿ ಗುರು ನೀ ಕೇಳಾ.
ನಿನ್ನ ಚಿತ್ಕಳಾಪರಬ್ರಹ್ಮಲಿಂಗವನವರಿಗೆ ಕುಡುವಾಗ
'ಅವರು ಮಾಡಿದ ದೋಷ
ಎನ್ನನಂಡಲೆವವು ಕೊಡಲಮ್ಮೆ'
ಎಂಬ ಭಾವ ನಿನ್ನಲ್ಲರಿಯದೆ,
ಕಾಂಚಾಣ ಕಪ್ಪಡದಾಸೆಗೆ ದೀಕ್ಷವ ಮಾಡಿ,
ಹಿಂದೆ ಉಣಬಾರದೆಂಬ ಶೀಲವ ಹಿಡಿದರೆ,
ಮುಂದೆ ಯಮದಂಡನೆ ಬರುವುದನರಿಯಾ?
ಇಂತೀ ಅಜ್ಞಾನಿಗಳ ಗುರು ಶಿಷ್ಯ ಸಂಬಂಧಕ್ಕೆ
ಎಂತು ಮೆಚ್ಚುವನಯ್ಯಾ
ನಮ್ಮ ಪರಮಗುರು ಪಡುವಿಡಿ
ಸಿದ್ಧಮಲ್ಲಿನಾಥಪ್ರಭುವೆ.