Index   ವಚನ - 231    Search  
 
ಗುರು ಕರುಣಿಸೆ ಇಷ್ಟಲಿಂಗವೆನ್ನ ಕರವ ಸೇರಲು ಸರ್ವಾಂಗವೆಲ್ಲ ಲಿಂಗಮಯವಾದುದು ನೋಡಾ! ಅದು ಎಂತೆಂದರೆ: ಇಷ್ಟಲಿಂಗದಿಂದ ಪ್ರಾಣಲಿಂಗ, ಪ್ರಾಣಲಿಂಗದಿಂದ ಭಾವಲಿಂಗತ್ರಯಗಳಾದವು. ಒಂದೊಂದು ಲಿಂಗದಲ್ಲಿ ಎರಡು ಲಿಂಗ ಹುಟ್ಟಿದವು: [ಇಷ್ಟಲಿಂಗದಿಂದ ಆಚಾರಲಿಂಗ ಗುರುಲಿಂಗ ಹುಟ್ಟಿದವು. ಪ್ರಾಣಲಿಂಗದಿಂದ ಶಿವಲಿಂಗ ಜಂಗಮಲಿಂಗ ಹುಟ್ಟಿದವು. ಭಾವಲಿಂಗದಿಂದ ಪ್ರಸಾದಲಿಂಗ ಮಹಾಲಿಂಗವೆಂಬೆರಡು ಲಿಂಗ ಹುಟ್ಟಿದವು.] ಇಂತೀ ಷಡ್ವಿಧಲಿಂಗದಲ್ಲಿ ಷಡ್ವಿಧಸಂಬಂಧ: ಘ್ರಾಣದಲ್ಲಿ ಆಚಾರಲಿಂಗ ಸಂಬಂಧ. ಜಿಹ್ವೆಯಲ್ಲಿ ಗುರುಲಿಂಗ ಸಂಬಂಧ. ನೇತ್ರದಲ್ಲಿ ಶಿವಲಿಂಗ ಸಂಬಂಧ. ತ್ವಕ್ಕಿನಲ್ಲಿ ಜಂಗಮಲಿಂಗ ಸಂಬಂಧ. ಶ್ರೋತ್ರದಲ್ಲಿ ಪ್ರಸಾದಲಿಂಗ ಸಂಬಂಧ. ಹೃದಯದಲ್ಲಿ ಮಹಾಲಿಂಗ ಸಂಬಂಧ. ಆಚಾರಲಿಂಗದರಿವು ಗಂಧ, ಗುರುಲಿಂಗದರಿವು ರಸ, ಶಿವಲಿಂಗದರಿವು ರೂಪು, ಜಂಗಮಲಿಂಗದರಿವು ಸ್ಪರುಶನ, ಪ್ರಸಾದಲಿಂಗದರಿವು ಶಬ್ದ, ಮಹಾಲಿಂಗದರಿವು ಪರಿಣಾಮ. ಒಂದೊಂದು ಲಿಂಗದಲ್ಲಿ ಆರುಲಿಂಗವಾದವು: ಆಚಾರಲಿಂಗದಲ್ಲಿ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಗುರುಲಿಂಗದಲ್ಲಿ ಆಚಾರಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಶಿವಲಿಂಗದಲ್ಲಿ ಆಚಾರಲಿಂಗ ಗುರುಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಪ್ರಸಾದಲಿಂಗದಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಇಂತಿವೆಲ್ಲ ಕೂಡಲ್ಕೆ ಮೂವತ್ತಾರು ಲಿಂಗ. ಆ ಮೂವತ್ತಾರು ಲಿಂಗದಲ್ಲಿ ಒಂದೊಂದು ಲಿಂಗದಲ್ಲಿ ಆರುಲಿಂಗ ಕೂಡಲ್ಕೆ ಇನ್ನೂರ ಹದಿನಾರು ಲಿಂಗವಾದವು. ಅಂಗಪ್ರಭೆಯಲ್ಲಿ ಲಿಂಗಪ್ರಭೆಯಾಗಿ, ಲಿಂಗಪ್ರಭೆಯಲ್ಲಿ ಅಂಗಪ್ರಭೆಯಾಗಿ, ಅಂಗಲಿಂಗಸಂಬಂಧಿಯಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.