ಲಿಂಗವ ಧ್ಯಾನಿಸುವನ ಅಂಗ ಕೈಲಾಸದ ರಾಜ್ಯಾಂಗಣ ಕಾಣಿರೊ.
ಲಿಂಗವ ನೋಡುವ ಕಂಗಳು ಪರಮಾತ್ಮನಿದಿರಲಿ ಕಟ್ಟಿಹ
ನಿಲವುಗನ್ನಡಿ ಕಾಣಿರೊ.
ಲಿಂಗವ ಕೊಂಡಾಡುವನ ಜಿಹ್ವೆ ಕೈಲಾಸದಲ್ಲಿ ಸಾರುವ
ಪಾರಿಗಂಟೆ ಕಾಣಿರೊ
ಲಿಂಗದ ಶ್ರುತಿಯ ಕೇಳುವನ [ಕಿವಿ] ಮಾಣಿಕ ಮುತ್ತಂ
ಮುಚ್ಚಿಡುವ ಕರಡಿಗೆ ಕಾಣಿರೊ.
ಲಿಂಗವ ಮುಟ್ಟಿ ಪೂಜಿಸಿದವನ ಹಸ್ತ ಸುಹಸ್ತ ಕಾಣಿರೊ.
ಇಂತೀ ಲಿಂಗಾಂಗಸಂಗಮರಸದಲ್ಲಿಪ್ಪ ಶರಣಂಗೆ
ಅಂಗವಿಕಾರವುಂಟೇನಯ್ಯಾ?
ಭೂತ ಸೋಂಕಿದ ಮೇಲೆ ಆತ್ಮನಗುಣ ಉಂಟೇನಯ್ಯಾ?
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ
ಲಿಂಗ ಸೋಂಕಿದ ಮೇಲೆ ಅಂಗಗುಣವುಂಟೇನಯ್ಯಾ?
Art
Manuscript
Music
Courtesy:
Transliteration
Liṅgava dhyānisuvana aṅga kailāsada rājyāṅgaṇa kāṇiro.
Liṅgava nōḍuva kaṅgaḷu paramātmanidirali kaṭṭiha
nilavugannaḍi kāṇiro.
Liṅgava koṇḍāḍuvana jihve kailāsadalli sāruva
pārigaṇṭe kāṇiro
liṅgada śrutiya kēḷuvana [kivi] māṇika muttaṁ
mucciḍuva karaḍige kāṇiro.
Liṅgava muṭṭi pūjisidavana hasta suhasta kāṇiro.
Intī liṅgāṅgasaṅgamarasadallippa śaraṇaṅge
aṅgavikāravuṇṭēnayyā?
Bhūta sōṅkida mēle ātmanaguṇa uṇṭēnayyā?
Paramaguru paḍuviḍi sid'dhamallināthaprabhuvemba
liṅga sōṅkida mēle aṅgaguṇavuṇṭēnayyā?