Index   ವಚನ - 242    Search  
 
ಕೈಲಾಸವೆಂಬುದು ಬೇರಿಲ್ಲಾ ಕಾಣಿರೋ! ಲಿಂಗಾಂಗಸಂಗಮರಸದಲ್ಲಿಪ್ಪ ಶರಣನ ಅಂತರಂಗದಲ್ಲಿ ಕೈಲಾಸವಿಪ್ಪುದು. ಎಂತಿಪ್ಪುದೆಂದರೆ ಹೇಳುವೆ ಕೇಳಿರಣ್ಣಾ: ಆಚಾರ-ಕ್ರಿಯೆಗಳೆಂಬ ಕೋಟೆ-ಕೊತ್ತಳಂಗಳು, ಶುಚಿ-ಶೀಲಗಳೆಂಬ ಅಗಳಂಗಳು, ಪುಣ್ಯ-ಪಾಪಗಳೆಂಬೆರಡ ನೋಡಿ ನಡೆದುದೆ ಕೈಲಾಸದ ಹೆಬ್ಬಾಗಿಲು ಕಾಣಿರೊ. ಧರ್ಮಸಂಚೆಗಳೆಂಬ ದಾರುವಂದಲಗಳು, ಕರ್ಮವ ಮೆಟ್ಟಿ ನಡೆದುದೆ ಹೊಸ್ತಿಲಸ್ತರ. ಶಿವಭಕ್ತಿ ಕೀರ್ತಿವಡೆದ ವಾರ್ತೆಯೆಂಬ ಹುಲಿಮುಖ ಡೆಂಕಣಿ ಮೇರುವ ಕಾಣಿರೊ. ಜ್ಞಾನ ಸುಜ್ಞಾನದೊಳು ಬೆರಸುತಿಪ್ಪುದೆ ಸೋಮಬೀದಿ ಸೂರ್ಯಬೀದಿ ಕಾಣಿರೊ. ಅರುವೆಂಬುದನಾಚರಿಸುವುದೆ ಶಿವ ಮೂರ್ತವಮಾಡುವ ಸಿಂಹಾಸನ ಕಾಣಿರೊ. ಮರವೆಂಬ ಮಾಯವ ಮೆಟ್ಟಿ ನಡೆದುದೆ ಸಿಂಹಾಸನವನೇರುವುದಕ್ಕೆ ಪಾವಟಿಗೆ ಕಾಣಿರಣ್ಣ. ಇಂತಪ್ಪ ಶೃಂಗಾರವೆಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭು ಒಲಿದ ಶಿವಶರಣನಂತರಂಗದಲ್ಲೆ ಇದ್ದಿತ್ತು.