Index   ವಚನ - 243    Search  
 
ಜ್ಯೋತಿ ಇದ್ದ ಗೃಹಕ್ಕೆ ತಮವುಂಟೇನಯ್ಯಾ? ಪರಂಜ್ಯೋತಿಲಿಂಗದ ಸಂಗದ ಬೆಳಗಲಿಹ ಮಹಾತ್ಮನಿಗೆ ಮಾಯಾತಮಂಧದ ಭೀತಿಯುಂಟೇನಯ್ಯಾ? ಕಂಠೀರವನಿಹ ವನದೊಳು ಕರಿವುಂಟೇನಯ್ಯಾ? ಲಿಂಗವೆಂಬ ಸಿಂಹದ ಮರೆಯಬಿದ್ದಾತಂಗೆ ಅಷ್ಟಮದವೆಂಬ ಕರಿಯ ಭಯವುಂಟೇನಯ್ಯಾ? ಗರುಡನಿದ್ದ ಸ್ಥಾನದಲ್ಲಿಗೆ ಉರಗನ ಭಯವುಂಟೇನಯ್ಯಾ? ಪರಮಾತ್ಮನೊಳುಬೆರೆದ ನಿಬ್ಬೆರಗಿ ಶರಣಂಗೆ ಕುಂಡಲಿಸರ್ಪನ ಭಯವುಂಟೇನಯ್ಯಾ? ಆನೆಯ ಮೇಲೆ ಹೋಗುವ ಮಾನವನಿಗೆ ಶ್ವಾನನ ಭಯವುಂಟೇನಯ್ಯಾ? ಲಿಂಗಾಂಗಸಮರಸವೆಂಬ ಮದ ತಲೆಗೇರಿ ಹೋಗುವ ಶಿವಶರಣಂಗೆ ಪಂಚೇಂದ್ರಿಯವೆಂಬ ಶ್ವಾನನ ಭಯವುಂಟೇನಯ್ಯಾ? ಉರಿವುತಿಹ ಅಗ್ನಿಗೆ ಸೀತದ ಭಯವುಂಟೇನಯ್ಯಾ? ಗುರುಕರುಣಾಗ್ನಿಯಲ್ಲಿ ಭವದಗ್ಧನಾದ ಶರಣಂಗೆ ಅನ್ಯಭಯಭೀತಿಯ ಚಳಿ ಉಂಟೇನಯ್ಯಾ? ಉರಗಮುಟ್ಟಲು ಸರ್ವಾಂಗವನೆಲ್ಲ ವಿಷಕೊಂಡಂತೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಲಿಂಗಸೋಂಕಿದವರೆಲ್ಲ ಸರ್ವಾಂಗಲಿಂಗಿಗಳಾದುದ ನೋಡಾ.