Index   ವಚನ - 254    Search  
 
ಮುಂದೆ ಮಾಡಿದ ಕರ್ಮ ಬೆನ್ನಟ್ಟಿ ಬರುವಾಗ, ಅದಕಿನ್ನು ದೇವರ ಹರಕೆಯೆಂದು ನುಡಿಯಲೇಕೆ? ಭ್ರಷ್ಟರಿರಾ ಕೇಳಿರೌ. ಮಾನವನಾಗಿ ಹುಟ್ಟಿ, ಕೊರಳಲ್ಲಿ ಕವಡಿಯ ಕಟ್ಟಿ, ಶ್ವಾನನಾಗಿ ಬೊಗಳುವುದು ಮುನ್ನಿನ ಕರ್ಮದ ದೆಸೆಯಲ್ಲದೆ, ವಗ್ಗನ ಕರೆತಂದು, ಮೈಲಾರನ ಹರಕೆ ಮುಟ್ಟಿತೆಂದು ನೀಡುವವನೊಬ್ಬ ಹಳೆನಾಯಿ. ಮೈಲಾರನ ಪೂಜಿಸುವರೆಲ್ಲ ನಾಯಾಗಿ ಹುಟ್ಟುವುದು ತಪ್ಪದು. ಉಟ್ಟುದ ಬಿಟ್ಟು ಅರಣ್ಯವಾಸಿಯ ಕಂಡರೆ ಬತ್ತಲೆ ಐದನೆ ಲಜ್ಜೆಭಂಡನೆಂದು ನುಡಿವರು. ಯೋನಿಯ ತೆರೆದು, ಬತ್ತಲೆಯಾಗಿ, ಚಿಕ್ಕದು ದೊಡ್ಡದು, ಹೆಣ್ಣು ಗಂಡು ಊರು ರಾಜ್ಯವೆಲ್ಲ ನೋಡುವಂದದಿ ನಡೆವರು. ನಡೆದು ನಮ್ಮ ಮಲ್ಲಾರಿಯ ಹರಕೆ ಮುಟ್ಟಿತೆಂದು ನುಡಿವ ಖೊಟ್ಟಿಗಳು ಇದು ತಮ್ಮ ಪೂರ್ವದ ಕರ್ಮವೆಂದರಿಯರು ನೋಡಾ. ಕಬ್ಬಿಣವಂಕಿಯ ತಮ್ಮ ತನುವಿಗೆ ಸಿಕ್ಕಿಸಿಕೊಂಡು ಪಾಶದಲ್ಲಿ ಹಳಿಗೆ ಕಟ್ಟಿ, ಅಂತರದಲ್ಲಿ ತಿರುವಿ, ಸಿಡಿಯೆಂದಾಡಿ, ಉಡುಚು ಮಾರಿ ಮಸಣಿಯೆಂಬ ಕೇತು ಭೂತ ದೈವವ ಪೂಜೆಮಾಡುವವರೆಲ್ಲ ಪ್ರೇತ ಭೂತಗಳಾಗಿ ಹುಟ್ಟುವದು ತಪ್ಪದು ನೋಡಾ. ಗುರುಲಿಂಗಜಂಗಮ ನಿಂದಿಸುವ ನಾಲಗೆ[ಗೆ] ಶಸ್ತ್ರವನೂರಿಸುವ, ಗುರುಲಿಂಗಜಂಗಮಕೆರಗದೆ ಪರದೈವಕೆರಗುವನ ತಲೆಯೊಳು ಬೆಂಕಿಯ ಹೊರಿಸುವ, ಶಿವನರಿಯಬಾರದೆ? ಗುರುಲಿಂಗಜಂಗಮಕಡಿಯಿಡದೆ, ಪರದೈವಕಡಿಯಿಡುವನ ಕಾಲಿಂಗೆ ಕೆಂಡವನಿಕ್ಕುವ ಶಿವನರಿಯಬಾರದೆ? ಇದು ನಮ್ಮ ದೇವರ ಹರಕೆ, ಅಗ್ನಿಗೊಂಡ ಗುಗ್ಗುಳ ಶಸ್ತ್ರವೆಂದು ನುಡಿವರು. ಚಿಮಿಕಿ ಡೆಂಕಣಿ ಕಿಚ್ಚಿನಕೊಂಡ ಇರಿವ ಶಸ್ತ್ರಕದ ಮಿಟ್ಟಿಗೆ ಇಂತಿವು ಮುಖ್ಯವಾದ ನಾನಾ ಬಾಧನೆಗಳೆಲ್ಲ ಯಮನಲ್ಲುಂಟು. ಯಮನಲ್ಲುಂಟಾದ ದೃಷ್ಟಾಂತವ ಮರ್ತ್ಯದಲ್ಲುಂಟು ಮಾಡಿಕೊಂಡು ಬಾಧನೆಗೆ ಸಿಲ್ಕಿ, ದೇವರ ಹರಕೆಯು ಮುಟ್ಟಿತೆಂದು ನುಡಿವ ಅಜ್ಞಾನಿ ಹೊಲೆಯರ ಕಂಡು ನನ್ನೊಳು ನಾ ಬೆರಗಾಗುತ್ತಿದ್ದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.