Index   ವಚನ - 262    Search  
 
ಬೆಟ್ಟದಷ್ಟು ಕರ್ಮವುಳ್ಳರೆ ಬೊಟ್ಟಿನಷ್ಟು ಶ್ರೀವಿಭೂತಿಯ ಧರಿಸಲು ಬಟ್ಟಬಯಲಾಗಿ ದುರಿತನ್ಯಾಯ ದೆಸೆಗೆಟ್ಟು ಓಡುವವು. ನೈಷ್ಠೆಯುಳ್ಳ ಶ್ರೀವಿಭೂತಿ ಧರಿಸಿಪ್ಪ ಸದ್ಭಕ್ತಂಗೆ ಕಾಲಮೃತ್ಯು, ಅಪಮೃತ್ಯು, ಮಾರಿಗಳೆಂಬವು ಮುಟ್ಟಲಮ್ಮವು. ಬ್ರಹ್ಮರಾಕ್ಷಸ ಪ್ರೇತ ಪಿಶಾಚಿಗಳು ಬಿಟ್ಟೋಡುವವು ಶ್ರೀವಿಭೂತಿಯ ಕಾಣುತ್ತಲೆ. ಮಂತ್ರ ಸರ್ವಕೆಲ್ಲ ಶ್ರೀವಿಭೂತಿಯಧಿಕ ನೋಡಾ. ಯಂತ್ರ ಸರ್ವಕೆಲ್ಲ ಶ್ರೀವಿಭೂತಿ ಅಧಿಕ ನೋಡಾ. ಸರ್ವ ಜಪತಪನೇಮ ನಿತ್ಯ ಹೋಮ ಗಂಗಾಸ್ನಾನ ಅನುಷ್ಠಾನವೆಲ್ಲಕೆಯಾ ಶ್ರೀವಿಭೂತಿ ಅಧಿಕ ನೋಡಾ. ಸರ್ವಕ್ರಿಯೆಗೆ ಶ್ರೀ ವಿಭೂತಿಯಧಿಕ ನೋಡಾ. ಸರ್ವವಶ್ಯಕೆ ಶ್ರೀವಿಭೂತಿಯಧಿಕ ನೋಡಾ. ಶ್ರೀ ವಿಭೂತಿಯಿಲ್ಲದಲಾವ ಕಾರ್ಯವೂ ಸಾಧ್ಯವಾಗದು. ಶ್ರೀವಿಭೂತಿ ವೃಷಭಾಕಾರ, ಶ್ರೀವಿಭೂತಿ ಚಿದಂಗ. ಸಾಕ್ಷಿ: “ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ | ಚಿದಂಗಂ ಋಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ||'' ಎಂದೆಂಬ ಶ್ರೀವಿಭೂತಿಯ ಸಂದುಸಂದು ಅವಯವಂಗಳು ರೋಮ ರೋಮ ಅಪಾದಮಸ್ತಕ ಪರಿಯಂತರದಲ್ಲು ಧರಿಸಿ ಶಿವದೇಹಿಯಾದೆನು ನೋಡಾ. ಅದು ಎಂತೆಂದರೆ : ಸಾಕ್ಷಿ: “ಅಪಾದಮಸ್ತಕಾಂತಂ ಚ ರೋಮಾದೌ ಭವತೇ ಶಿವಃ | ಸ್ವಕಾಯಮುಚ್ಯತೇ ಲಿಂಗಂ ವಿಭೂತ್ಯೂದ್ಧೂಳನಾದ್ ಭವೇತ್ ||'' ಹೀಗೆಂಬ ವಿಭೂತಿಯ ಧರಿಸಿ, ಭವಸಾಗರವ ದಾಟಿ ನಿತ್ಯನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.