Index   ವಚನ - 261    Search  
 
ಹಲವು ಜನ್ಮದಲೊದಗಿದ ಪಾಪವ ತೊಲಗಿಸುವುದಕ್ಕೆ ಶ್ರೀವಿಭೂತಿ. ಮಲಿನದೇಹದ ಹೊಲೆಯ ಕಳೆವುದಕ್ಕೆ ಶ್ರೀವಿಭೂತಿ. ದುರಿತವ ಕೆಡೆಮೆಟ್ಟುವರೆ ಶ್ರೀವಿಭೂತಿ ದುಃಕೃತ್ಯವ ನಿಟ್ಟೊರೆಸುವರೆ ಶ್ರೀವಿಭೂತಿ. ಮಲತ್ರಯಂಗಳನಳಿವರೆ ಶ್ರೀವಿಭೂತಿ. ಅಷ್ಟಮದಂಗಳ ಸುಟ್ಟು ಸೂರೆಬಡುವುದಕ್ಕೆ ಶ್ರೀವಿಭೂತಿ. ತನುಮದ ವ್ಯಸನ ವರ್ಗ ಗುಣಕರಣ ಮಲಮಾಯಕಂಗಳ ಸುಟ್ಟು ಸೂರೆಮಾಡುವುದು ಶ್ರೀವಿಭೂತಿ. ಪಣೆಯೊಳು ಧರಿಸ ಕಲಿಸಿ, ಒಳಗೆ ಹೊರಗೆ ತೊಳಗಿ ಬೆಳಗಿ ತೋರಿದ ಚಿನ್ಮಯ ಚಿದ್ರೂಪ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.