Index   ವಚನ - 272    Search  
 
ಹರ ತ್ರಿಪುರದಹನದಲ್ಲಿ [ಈಕ್ಷಿಸಿ] ನೋಡಲಾಕ್ಷಣ ನಯನಜಲದೊರೆದು ಉದಯವಾದ ಶ್ರೀರುದ್ರಾಕ್ಷಿ. ಪರಮ ಮುನಿಗಳಿಗೆ ಮೋಕ್ಷಾರ್ಥವನೀವ ಶ್ರೀರುದ್ರಾಕ್ಷಿ. ಧರೆಯ ಸದ್ಭಕ್ತರುಗಳ ಪಾಲನಮಾಡಿ ತೋರುವ ಶ್ರೀರುದ್ರಾಕ್ಷಿ, ಕರ್ಮಶರಧಿಯ ನಿಟ್ಟೊರಸುವುದಕ್ಕೆ ಶ್ರೀರುದ್ರಾಕ್ಷಿ. ದರುಶನವ ಮಾಡಿದರೆ ಲಕ್ಷಪುಣ್ಯ, ಸ್ಪರುಶನವ ಮಾಡಿದರೆ ಕೋಟಿಫಲಂ, ಧರಿಸಿದಡಂ ದಶಶತಕೋಟಿ ಫಲಂ ಇನಿತು ಫಲವಪ್ಪುದು ಶ್ರೀ ರುದ್ರಾಕ್ಷಿಯಿಂ. ಸಾಕ್ಷಿ: “ಲಕ್ಷಂ ತದ್ದರ್ಶನಾತ್ಪುಣ್ಯಂ ಕೋಟಿಃ ಸಂಸ್ಪರ್ಶನಾದಪಿ | ದಶಕೋಟಿ ಶತಂ ಪುಣ್ಯಂ ಧಾರಣಾತ್ ಲಭತೇ ನರಃ ||'' ಹೀಗೆನಿಸುವ ರುದ್ರಾಕ್ಷಿಯ ಧರಿಸಿ, ರುದ್ರಪದವಿಯನೈದುವುದು ತಪ್ಪದು ನೋಡಾ! ಅದು ಹೇಗೆಂದರೆ: ಆವನೊಬ್ಬನು ಕೊರಳಲ್ಲಿ ರುದ್ರಾಕ್ಷಿಯ ಧರಿಸೆ ಅವನ ಕುಲಕೋಟಿ ಸಹವಾಗಿ ಶಿವಲೋಕವನೈದರೆ? ಅದಕೆ ಶ್ರುತಿ ದೃಷ್ಟವುಂಟೇಯೆಂದರೆ ಉಂಟು. ಸಾಕ್ಷಿ: “ರುದ್ರಾಕ್ಷಾಶ್ರಿತಕಂಠಶ್ಚ ಗೃಹೇ ತಿಷ್ಠತಿ ಯೋ ನರಃ | ಕುಲೈಕಂ ವಿಂಶಯುಕ್ತಂ ಚ ಶಿವಲೋಕೇ ಮಹೀಯತೇ ||'' ಎಂದೆನಿಸುವ ರುದ್ರಾಕ್ಷಿಯ ಮೂಲ ಬ್ರಹ್ಮನೆಂದಿತ್ತು ಪೌರಾಣ. ರುದ್ರಾಕ್ಷಿಯ ಗಳ ವಿಷ್ಣುವೆಂದಿತ್ತು ಪೌರಾಣ. ರುದ್ರಾಕ್ಷಿಯ ಮುಖ ಸದಾಶಿವನೆಂದಿತ್ತು ಪೌರಾಣ. ರುದ್ರಾಕ್ಷಿಯ ಸರ್ವಾಂಗವೆಲ್ಲ ಸರ್ವದೇವರೆಂದಿತ್ತು ಪೌರಾಣ. ಸಾಕ್ಷಿ: “ರುದ್ರಾಕ್ಷಿಮೂಲಂ ಬ್ರಹ್ಮಾ ಚ ತನ್ನಾಳಂ ವಿಷ್ಣುರುಚ್ಯತೇ | ಮುಖಂ ಸದಾಶಿವಂ ಪ್ರೋಕ್ತಂ ಬಿಂದುಃ ಸರ್ವತ್ರ ದೇವತಾ ||'' ಎಂದೆನಿಸುವ ರುದ್ರಾಕ್ಷಿಯ ಧರಿಸಿ ರುದ್ರನಾಗಿದ್ದೆನು. `ಅತಏವ ರುದ್ರಾಕ್ಷಿಧಾರಣಂ ರುದ್ರಾ'ಯೆಂದಿತ್ತು ವೇದ. ರುದ್ರಾಕ್ಷಿಯ ಧರಿಸಿ ಶುದ್ಧಚಿದ್ರೂಪನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.