Index   ವಚನ - 281    Search  
 
ಪಂಚಾಕ್ಷರವೆ ಶಿವನ ಪಂಚಮುಖದಿಂದಲುದಯವಾಗಿ ಪಂಚತತ್ವಸ್ವರೂಪವಾಯಿತ್ತು ನೋಡಾ. ಆ ಪಂಚಸ್ವರೂಪಿಂದಲೆ ಬ್ರಹ್ಮಾಂಡ ನಿರ್ಮಿತವಾಯಿತ್ತು. ಆ ಬ್ರಹ್ಮಾಂಡದಿಂದ ಪಿಂಡಾಂಡ ನಿರ್ಮಿತವಾಯಿತ್ತು. ಅದು ಎಂತೆಂದರೆ ಹೇಳುವೆ ಕೇಳಿರಣ್ಣಾ: ಸದ್ಯೋಜಾತಮುಖದಲ್ಲಿ ನಕಾರ ಪುಟ್ಟಿತ್ತು, ಆ ನಕಾರದಿಂದ ಪೃಥ್ವಿ ಪುಟ್ಟಿತ್ತು, ವಾಮದೇವಮುಖದಲ್ಲಿ ಮಕಾರ ಪುಟ್ಟಿತ್ತು. ಆ ಮಕಾರದಿಂದ ಅಪ್ಪು ಪುಟ್ಟಿತ್ತು, ಅಘೋರಮುಖದಲ್ಲಿ ಶಿಕಾರ ಜನನ. ಆ ಶಿಕಾರದಿಂದ ಅಗ್ನಿ ಪುಟ್ಟಿತ್ತು, ತತ್ಪುರುಷಮುಖದಲ್ಲಿ ವಕಾರ ಪುಟ್ಟಿತ್ತು, ಆ ವಕಾರದಿಂದ ವಾಯು ಪುಟ್ಟಿತ್ತು, ಈಶಾನಮುಖದಲ್ಲಿ ಯಕಾರ ಜನನ, ಆ ಯಕಾರದಿಂದ ಆಕಾಶ ಹುಟ್ಟಿತ್ತು, ಈ ಪಂಚತತ್ವಸ್ವರೂಪಿಂದ ಬ್ರಹ್ಮಾಂಡ ನಿರ್ಮಿತವಾಯಿತ್ತು. ಆ ಬ್ರಹ್ಮಾಂಡದಿಂದ ಪಿಂಡಾಂಡ ನಿರ್ಮಿತವಾಯಿತ್ತು. ಹೇಗೆ ನಿರ್ಮಿತವಾಯಿತ್ತೆಂದರೆ, ಪೃಥ್ವಿ ಅಪ್ ತೇಜ ವಾಯು ಆಕಾಶವೆಂಬ ಪಂಚಭೂತಂಗಳಿಂದವೆ ಪಂಚವಿಂಶತಿತತ್ವಂಗಳುತ್ಪತ್ಯವಾದವು. ಆ ಪಂಚವಿಂಶತಿ ತತ್ವಂಗಳಿಂದವೆ ಶರೀರವಾಯಿತ್ತು. ನಕಾರದಿಂದ ಕರ್ಮೇಂದ್ರಿಯಂಗಳ ಜನನ. ಮಕಾರದಿಂದ ಪಂಚವಿಷಯಂಗಳುತ್ಪತ್ಯ. ಶಿಕಾರದಿಂದ ಬುದ್ಧೀಂದ್ರಿಯಗಳು ಜನನ. ವಕಾರದಿಂದ ಐದು ಪ್ರಾಣವಾಯುಗಳ ಜನನ. ಯಕಾರದಿಂದ ಅಂತಃಕರಣಚತುಷ್ಟಯಂಗಳು `ನಮಃ ಶಿವಾಯ' `ನಮಃ ಶಿವಾಯ'ವೆಂಬ ಪಂಚಾಕ್ಷರದಿಂದವೆ ಉತ್ಪತ್ಯವೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.