Index   ವಚನ - 282    Search  
 
ಗುದದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ, ಚತುಃಷ್ಕೋಣ, ಚೌದಳಪದ್ಮ, ಅಲ್ಲಿಯ ಅಕ್ಷರ ವಶಷಸವೆಂಬ ನಾಲ್ಕು ಅಕ್ಷರ, ಅದರ ವರ್ಣ[ಪೀತ], ಅದಕ್ಕೆ ಅಧಿದೇವತೆ[ಬ್ರಹ್ಮ], ಭಕ್ತ ಮುಖ, ಕ್ರಿಯಾಶಕ್ತಿ, ಆಚಾರಲಿಂಗ, ನಕಾರ ಸ್ವಾಯತ. ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ, ಅಪ್ಪುವೆಂಬ ಮಹಾಭೂತ, ಧನುರ್ಗತಿ, ಷಡುದಳಪದ್ಮ, ಅಲ್ಲಿಯ ಅಕ್ಷರವಾರು ಬ ಭ ಮ ಯ ರ ಲ; ಅದರ ವರ್ಣ [ಶ್ವೇತ], ಅಧಿದೇವತೆ [ವಿಷ್ಣು], ಮಹೇಶ ಮುಖ, ಜ್ಞಾನಶಕ್ತಿ, ಗುರುಲಿಂಗ, ಅಲ್ಲಿ ಮಕಾರ ಸ್ವಾಯತ. ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ, ತೇಜವೆಂಬ ಮಹಾಭೂತ, ತ್ರಿಕೋಣ, ದಶದಳಪದ್ಮ, ಅಲ್ಲಿಯ ಅಕ್ಷರ ಹತ್ತು; ಡಢಣ ತಥದಧನ ಪಫ, ಅದಕ್ಕೆ [ಹರಿತ]ವರ್ಣ, ಅಧಿದೇವತೆ [ರುದ್ರ], ಪ್ರಸಾದಿ ಮುಖ, ಇಚ್ಚಾಶಕ್ತಿ, ಶಿವಲಿಂಗ, ಶಿಕಾರ ಸ್ವಾಯತ. ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ, ಷಟ್ಕೋಣ, ದ್ವಿದಶದಳಪದ್ಮ, ಅಲ್ಲಿಯ ಅಕ್ಷರ ಹನ್ನೆರಡು: ಕ ಖ ಗ ಘ ಙ ಚ ಛ ಜ ಝ ಞ ಟ ಠ ಅದರ ವರ್ಣ [ಮಾಂಜಿಷ್ಟ], ಅದಕ್ಕೆ ಅಧಿದೇವತೆ [ಈಶ್ವರ], ಪ್ರಾಣಲಿಂಗಿ ಮುಖ, [ಆದಿ]ಶಕ್ತಿ, ಜಂಗಮಲಿಂಗ, ಅಲ್ಲಿ ವಕಾರ ಸ್ವಾಯತ. ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ, ವರ್ತುಳಾಕಾರ, ಷೋಡಷದಳಪದ್ಮ, ಅಲ್ಲಿಯ ಅಕ್ಷರ ಹದಿನಾರು: ಅ ಆ ಇ ಈ ಉ ಊ ಋ ೠ ಲೃ ಲೄ ಏ ಐ ಓ ಔ ಅಂ ಅಃ, ಅದಕ್ಕೆ ವರ್ಣ [ಕಪೋತ], ಅಧಿದೇವತೆ ಸದಾಶಿವನು, ಶರಣ ಮುಖ, [ಪರಾ]ಶಕ್ತಿ, [ಪ್ರಸಾದಲಿಂಗ, ಯಕಾರ ಸ್ವಾಯತ. ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ದ್ವಿದಳಪದ್ಮ,] ಅಲ್ಲಿಯ ಅಕ್ಷರವೆರಡು: ಹಂ ಕ್ಷಂ ವೆಂಬ [ಅಕ್ಷರ], ಮಾಣಿಕ್ಯ ವರ್ಣ, [ಅದಕ್ಕೆ ಅಧಿದೇವತೆ ಮಹೇಶ್ವರ], ಐಕ್ಯ ಮುಖ, ಕ್ರಿಯಾಶಕ್ತಿ, ಮಹಾಲಿಂಗ, ಓಂಕಾರ ಸ್ವಾಯತ. ಇಂತೀ ಷಡುಚಕ್ರದ, ಷಡುಸ್ಥಳದ, ಷಡುಲಿಂಗದ, ಷಡುಶಕ್ತಿಯರಿಗೆ ಷಡಕ್ಷರವೆ ಪ್ರಾಣವಾಗಿ ವಿರಾಜಿಸುತ್ತಿದ್ದಿತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.