Index   ವಚನ - 283    Search  
 
ಮಂತ್ರವ ಬಲ್ಲೆವೆಂದು ಪರಮನುಜರಿಗೆ ಭೂತ ಪ್ರೇತ ಪಿಶಾಚಿಗಳು ಹೊಡೆದರೆ ಬಿಡಿಸುವ ಸಂತೆಸೂಳೆಯ ಮಕ್ಕಳು ನೀವು ಕೇಳಿರೋ. ನಿಮ್ಮ ತನುವಿನೊಳಿಹ ಪಂಚಭೂತಂಗಳು ನಿಮ್ಮ ತಿಂದು ತೇಗುತಿಹವು. ಅವನೇಕೆ ನೀವು ಬಿಡಿಸಿಕೊಳಲಾರದಾದಿರೊ? ಆಳುವ ಪಂಚಭೂತಶರೀರದ ಹೊಲೆಯ ಕಳೆದು ಶಿವದೇಹಿಯಮಾಡುವುದೆ ಶಿವಪಂಚಾಕ್ಷರಿ. ಜನನ ಮರಣಗಳ ನಿಟ್ಟೊರಸುವುದೆ ಶ್ರೀಪಂಚಾಕ್ಷರಿ. ಕಾಲಮೃತ್ಯು ಅಪಮೃತ್ಯು ಮಾರಿಗಳನೋಡಿಸುವುದೆ ಶ್ರೀಪಂಚಾಕ್ಷರಿ. ನಿತ್ಯ ಮುಕ್ತಿಯ ತೋರುವುದೆ ಶ್ರೀಪಂಚಾಕ್ಷರಿ. ಸತ್ಯ ಜಗದೊಳಿರಿಸುವ ಶ್ರೀಪಂಚಾಕ್ಷರಿ. ಏಳುಕೋಟಿ ಮಹಾಮಂತ್ರಕೆ ತಾಯಿ ಶ್ರೀಪಂಚಾಕ್ಷರಿ ಎಂಬುದನರಿಯದೆ, ಕಳ್ಳಮಂತ್ರವ ಕಲಿತು, ಕಾಳುಭವಕೀಡಾಗಿ ಕಾಳೊಡಲ ಹೊರೆವ ಮಾನವರು ನೀವು ಕೇಳಿರೊ. ಸಾಕ್ಷಿ: “ಸಪ್ತಕೋಟಿ ಮಹಾಮಂತ್ರಾ ಉಪಮಂತ್ರಾಸ್ತ್ವನೇಕಶಃ | ಪಂಚಾಕ್ಷರ್ಯಾಂ ಪ್ರಲೀಯಂತೇ ಪುನಸ್ತಥೈವ ನಿರ್ಗತಾಃ ||'' ಎಂದೆಂಬ ಮಂತ್ರವನರಿಯದೆ, ಅಂಧಕರಂತೆ ಕಾಣದೆ ಹುಡುಕುವ ಸಂದೇಹಿಗಳಿಗಹುದೇನಯ್ಯಾ `ನಮಃ ಶಿವಾಯ' `ನಮಃ ಶಿವಾಯ' ಎಂಬ ಮಂತ್ರ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ?