ಮತ್ತಂ
ತಮ್ಮ ತಮ್ಮ ಹಸ್ತದ ತೊಂಬತ್ತಾರಂಗುಲ ಪ್ರಮಾಣದ ದೇಹದ
ಗುದದಿಂ ಮೇಲೆರಡಂಗುಲ ವೃಷಣದಿಂ ಕೆಳಗೆರಡಂಗುಲ-
ಮುಭಯ ಮಧ್ಯದ ಚತುರಸ್ರದ ಭೂಮಿಯ
ನಡುವಣ ತ್ರಿಕೋಣೆಯಂತರಾಳದ ಮಂಡಲತ್ರಯ ಧರಣಿಯ
ಪೀತವರ್ಣದ ವಾದಿಸಾಂತಯುಕ್ತಮಾದ
ಚೌದಳ ಕಮಲಕರ್ಣಿಕೆಯ
ಸೂಕ್ಷ್ಮರಂಧ್ರಗತ ಪ್ರಣವ ತಾರಕಾಕೃತಿಯ
ನಕಾರಮೆ ಆಚಾರಲಿಂಗಮದು
ನಿನ್ನ ಸದ್ಯೋಜಾತ ಸ್ವರೂಪಮಾದುದಯ್ಯಾ,
ಪರಮ ಶಿವಲಿಂಗ ಪಟುತರ ಕೃಪಾರಸ ತರಂಗ.