Index   ವಚನ - 112    Search  
 
ಮತ್ತಂ, ಗುಹ್ಯಮಂ ತ್ರಯೋದಶಾಂತದೊಳ್ಬೆರಸಿ ಪರಾಪರದೊಳೊಂದಿಸೆ ಹೌಂ ಎಂಬಾದಿಬೀಜಮಾಯ್ತು. ಮರಲ್ದುಂ, ಹ್ ಎಂಬ ಜೀವಮಂ ವರ್ಗಾದಿಯಾದಕಾರದೊಳ್ಮೇಳ್ಮೇಳಿಸಿ ಶಕ್ತಿಸಂಜ್ಞಿತ ಬಿಂದುವಂ ಬೆರಸೆ ಹಂ ಎನಿಸಿತ್ತು. ಬಳಿಕ್ಕಂ, ಶಕ್ತಿಸಂಜ್ಞಿತವಾದ ಸ್ ಎಂಬ ವ್ಯಂಜನಮಂ ಕಲಾಸಂಜ್ಞಿತವಾದ ಕಾರಣದೊಳ್ಪುದುಗೆ ಸ ಎನಿಸಿತ್ತು. ಮತ್ತೆಯುಂ, ವ್ಯಂಜನಶಕ್ತಿ ಬೀಜವಾದ ಸ್ ಎಂಬುದು ಮಾತ್ರಾದಿ ಸಂಜ್ಞಿತಕಾರಮನೊಂದೆ ಎಂದಿನಂತೆ ಸ ಎನಿ[ಸಿ] ತ್ತು. ಬಳಿಕಂ, ವರುಣವರ್ಗದ ನಾಲ್ಕನೆ ಯ ಎಂಬಕ್ಕರವುಂ ಮೂರನೆಯ ಸ್ವರಮನಸ್ಥಿ ಸಂಜ್ಞಿತಮಾದ ಶ್ ಎಂಬಕ್ಕರದೊಡನೆ ಕೂಡಿಸೆ ಶಿ ಎನಿಸಿತ್ತು. ಸೋಮಾಂತ ಸಂಜ್ಞಿಕವಾದ ವಕಾರಮಂ ದ್ವಿಕಲಾಸಂಜ್ಞಿತವಾದಾಕಾರಮ ನೊಂದಿಸೆ ವಾ ಎನಿಸಿತ್ತು. ವಾಯುಬೀಜವಾದ ಯ್ ಎಂಬಕ್ಕರವನಾದಿಕಲಾಸಂಜ್ಞಿಕ ಮಾದಕಾರದೊಡನೆ ಕೂಡಿಸೆ ಯ ಎನಿಸಿತ್ತಿಂತು ಹೌಂ ಹಂ ಸ ಸದಾಶಿವಾಯ ಎಂಬಷ್ಟಾಕ್ಷರಮಂತ್ರಮಂ ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ.