Index   ವಚನ - 129    Search  
 
ಇಂತು ಪಂಚಪ್ರಣವ ನಿರೂಪಣಾನಂತರದಲ್ಲಿ ಬ್ರಹ್ಮಭೇದವಿಧಿಯಂ ಪೇಳ್ವೆನೆಂತೆನೆ- ಬ್ರಹ್ಮವೆಂದೊಡೆ ದೊಡ್ಡಿತ್ತಹತನದಿಂದೆಯುಂ ಪೂರ್ಣವಹಣದಿಂದೆಯುಂ `ಸರ್ವಂ ಖಲ್ವಿದಂ ಬ್ರಹ್ಮ'ವೆಂಬ ವಚನಾರ್ಥ ಸಾರ್ಥಕವಾಗಿಯಾ ಆದ್ವಿತೀಯ ಶಿವತತ್ವ ಬ್ರಹ್ಮವೆ ಪಂಚಪ್ರಕಾರವಾದವಾ- ಪಂಚಬ್ರಹ್ಮವೊಂದೊಂದೈದೈದಾಗುತ್ತಿರ್ಪತ್ತೈದಾದುದೆಂತೆನೆ ಮೂರ್ತಿಬ್ರಹ್ಮ, ತತ್ವಬ್ರಹ್ಮ, ಭೂತಬ್ರಹ್ಮ ಪಿಂಡಬ್ರಹ್ಮ, ಕಲಾಬ್ರಹ್ಮಗಳೆಂಬೀವೈದುಂ ಪಂಚಬ್ರಹ್ಮಂಗಳಿವಕ್ಕೆ ವಿವರವೆಂತೆನೆ- ಅಕಾರೋಕಾರಮಕಾರಾಧಿದೇವತೆಗಳಾದ ಸೃಷ್ಟಿಸ್ಥಿತ್ಯಂತ್ಯಕಾರಿಗಳಾದ ಬ್ರಹ್ಮ ವಿಷ್ಣು ರುದ್ರರುಂ ಸಾಕಲ್ಯಾದಿ ಪಂಚಪ್ರಣವಾಂಗರೂಪ ಸಮಸ್ತಾಕ್ಷರಂಗಳು- ಮಿವೆಲ್ಲವಾದ ಬ್ರಹ್ಮ ಸಂಜ್ಞಿತವಾದ ಹಕಾರಾಂತಸ್ಥವಾದುದರಿಂದೀ ಸರ್ವವುಂ ಮೂರ್ತಿಬ್ರಹ್ಮವೆನಿಕುಂ. ಮತ್ತವಿೂ ತ್ರಿವರ್ಣಸಂಭೂತವಾದ ಸಮಸ್ತ ವರ್ಣತತ್ವಂಗಳ್ಗೆಯು ಶಿವತತ್ವವೆ ಪ್ರಭುವಾದುದರಿಂ ಶಿವಬೀಜ ಸಂಜ್ಞಿಕವಾದ ಹ ಎಂಬ ಶುದ್ಧ ಪ್ರಸಾದಾಧ್ಯಾತ್ಮಪ್ರಸಾದಾಂತವಾದ ಪಂಚಪ್ರಸಾದಮಂತ್ರವೆ ತತ್ವಬ್ರಹ್ಮವೆನಿಕುಂ. ಬಳಿಕ್ಕಂ ಮಾಂಸ ಸಂಜ್ಞಿಕವಾದ ಲಕಾರವೆ ಪೃಥ್ವೀಭೂತ ಬೀಜಂ. ಮೇದಸ್ಸಂಜ್ಞಿಕವಾದ ವಕಾರವೆ ಜಲಭೂತ ಬೀಜಂ. ಷಷ್ಠ್ಯ ಸಂಜ್ಞಿಕವಾದ ರಕಾರವೆ ತೇಜೋಭೂತ ಬೀಜಂ. ಸಪ್ತಮ ಸಂಜ್ಞಿಕವಾದ ಯಕಾರವೆ ವಾಯುಭೂತ ಬೀಜಂ ಪಂಚಮ ಸಂಜ್ಞಿಕವಾದ ಹಕಾರವೆ ಆಕಾಶಭೂತ ಬೀಜವೀ ಪ್ರಕಾರದಿಂ ಪಂಚಭೂತಾತ್ಮಕವಾದುದೆ ಭೂತಬ್ರಹ್ಮವೆನಿಕುಂ. ಮರಲ್ದುಂ, ಪ್ರಕೃತಿ ಸಂಜ್ಞಿಕವಾದ ಅ ಇ ಉ ಋ ಌ ಎ ಒಯೆಂಬೀ ಪ್ರಕೃತಿಗಳಲ್ಲಿ ಋ ಌ ದ್ವಯಂಮಂ ಬಿಟ್ಟುಳಿದ ಅ ಇ ಉ ಎ ಒ ಯೆಂಬೀಯೈದಕ್ಕರಮಂ ಪಂಚಸಂಜ್ಞಿತವಾದ ಹಕಾರದೊಡನೆ ಕೂಡೆ, ಬಿಂದು ನಾದ ಸೌಂಜ್ಞಿಕವಾದ ಸೊನ್ನೆಯೊಳ್ಬೆಸಸೆ, ಹ್ರಂ ಹ್ರೀಂ ಹ್ರುಂ ಹ್ರೇಂ ಹ್ರೌಂ ಎಂಬೀ ಬ್ರಹ್ಮಬೀಜಂಗಳೈದಂ ಪೇಳ್ದು, ಮತ್ತವಿೂ ಬೀಜಗಳೊಳ್ವಾಚಕವಾದ ಪಂಚಬ್ರಹ್ಮಂಗಳಂ ಪೇಳ್ವೆನೆಂತೆನೆ- ಸದ್ಯೋಜಾತ ವಾಮದೇವಾಘೋರ ತತ್ಪುರುಷೇಶಾನಂಗಳೆಂಬಿವೆ ಪಂಚಬ್ರಹ್ಮಂಗಳಿವಕ್ಕೆ ಪ್ರಣವವಾದಿಯಾಗಿ ನಮಃ ಪದಂ ಕಡೆಯಾಗಿ ಚತುರ್ಥ್ಯಂತಮಂ ಪ್ರಯೋಗಿಸೆ ಆ ಪಂಚಬ್ರಹ್ಮ ಮಂತ್ರೋದ್ಧರಣೆಯಾದುದೆಂತನೆ- ಓಂ ಹ್ರಂ ಸದ್ಯೋಜಾತಾಯ ನಮಃ ಓಂ ಹ್ರೀಂ ವಾಮದೇವಾಯ ನಮಃ ಓಂ ಹ್ರುಂ ಅಘೋರಾಯ ನಮಃ ಓಂ ಹ್ರೇಂ ತತ್ಪುರುಷಾಯ ನಮಃ ಓಂ ಹ್ರೌಂ ಈಶಾನಾಯ ನಮಃ ಎಂದು ಶಿವಬೀಜದೋಳ್ವೀವ ಪ್ರಕೃತಿ ಪಂಚಾಕ್ಷರಂಗಳಂ ಕೂಡಿಸಿ ಸಬಿಂದುವಾಗುಚ್ಚರಿಸೆ, ಪಂಚಬ್ರಹ್ಮವೆನಿಸಿದ ಕರ್ಮಸಾದಾಖ್ಯ ಸ್ವರೂಪಮೆ ಪಿಂಡಬ್ರಹ್ಮವೆನಿಕುಂ. ಮತ್ತಂ, ಪಿಂಡಬ್ರಹ್ಮವೆಂಬ ಪಂಚಬ್ರಹ್ಮ ನಿರೂಪಣಾನಂತರದಲ್ಲಿಯಾ ಪಂಚಬ್ರಹ್ಮಮಂತ್ರಕ್ಕೆ ಮೂವತ್ತೆಂಟು ಕಳೆಗಳುಂಟದೆಂತೆನೆ- ಈಶಾನ ತತ್ಪುರುಷಾಘೋರ ವಾಮದೇವ ಸದ್ಯೋಜಾತಂಗಳಿವಕ್ಕೆ ವಿವರಂ- ಈಶಾನಕ್ಕೈದು ಕಲೆ. ತತ್ಪುರುಷಕ್ಕೆ ನಾಲ್ಕು ಕಲೆ. ಅಘೋರಕ್ಕೆಂಟು ಕಲೆ. ವಾಮದೇವಕ್ಕೆ ಪದಿರ್ಮೂಕಲೆ. ಸದ್ಯೋಜಾತಕ್ಕೆಂಟು ಕಲೆ.ಅಂತು, ಮೂವತ್ತೆಂಟು ಕಲೆ. ಇವಕ್ಕೆ ವಿವರಂ, ಮೊದಲೀಶಾನಕ್ಕೆ- `ಈಶಾನಸ್ಸರ್ವ ವಿದ್ಯಾನಾಂ' ಇದು ಮೊದಲ ಕಲೆ. `ಈಶಾನಾಸ್ಸರ್ವ ಭೂತಾನಾಂ' ಇದೆರಡನೆಯ ಕಲೆ. `ಬ್ರಹ್ಮಣಾಧಿಪತಿ ಬ್ರಹ್ಮಣಾಧಿಪತಿ ಬ್ರಹ್ಮ' ಇದು ಮೂರನೆಯ ಕಲೆ. `ಶಿವೋಮೇsಸ್ತು' ಇದು ನಾಲ್ಕನೆಯ ಕಲೆ. `ಸದಾ ಶಿವೋಂ' ಇದು ಐದನೆಯ ಕಲೆ. ತತ್ಪುರುಷಕ್ಕೆ- `ತತ್ಪುರುಷಾಯ ವಿದ್ಮಹೇʼ ಇದು ಮೊದಲ ಕಲೆ. `ಮಹಾದೇವಾಯ ಧೀಮಹಿತನ್ನೋ' ಇದೆರಡನೆಯ ಕಲೆ. `ರುದ್ರಃ' ಇದು ಮೂರನೆಯ ಕಲೆ. `ಪ್ರಚೋದಯಾತ್' ಇದು ನಾಲ್ಕನೆಯ ಕಲೆ. ಅಘೋರಕ್ಕೆ `ಅಘೋರೇಭ್ಯಃ' ಇದು ಮೊದಲ ಕಲೆ. `ಘೋರೇಭ್ಯಃ' ಇದು ಎರಡನೆಯ ಕಲೆ. `ಘೋರಘೋರ' ಇದು ಮೂರನೆಯ ಕಲೆ. `ತರೇಭ್ಯ' ಇದು ನಾಲ್ಕನೆಯ ಕಲೆ. `ಸರ್ವತಃ' ಇದೈದನೆಯ ಕಲೆ.`ಸರ್ವ' ಇದಾರನೆಯ ಕಲೆ. `ಸರ್ವೇಭ್ಯೇ ನಮಸ್ತೇsಸ್ತು' ಇದೇಳನೆಯ ಕಲೆ. `ರುದ್ರ ರೂಪೇಭ್ಯಃ' ಇದೆಂಟನೆಯ ಕಲೆ. ವಾಮದೇವಕ್ಕೆ- `ವಾಮದೇವಾಯ' ಇದು ಮೊದಲ ಕಲೆ. `ಜ್ಯೇಷ್ಠಾಯ' ಇದೆರಡನೆಯ ಕಲೆ. `ರುದ್ರಾಯ ನಮಃ' ಇದು ಮೂರನೆಯ ಕಲೆ. `ಕಲಾಯ' ಇದು ನಾಲ್ಕನೆಯ ಕಲೆ. `ಕಾಲ' ಇದೈದನೆಯ ಕಲೆ. `ವಿಕರಣಾಯ ನಮಃ' ಇದಾರನೆಯ ಕಲೆ. `ಬಲಂ' ಇದೇಳನೆಯ ಕಲೆ. `ವಿಕರಣಾಯ' ಇದೆಂಟನೆಯ ಕಲೆ. `ಬಲಂ' ಇದೊಂಬತ್ತನೆಯ ಕಲೆ. `ಪ್ರಮಥನಾಥಾಯ' ಇದು ಪತ್ತನೆಯ ಕಲೆ. `ಸರ್ವಭೂತ ದಮನಾಯ ನಮಃ' ಇದು ಪನ್ನೊಂದನೆಯ ಕಲೆ `ಮನ' ಇದು ಪನ್ನೆರಡನೆಯ ಕಲೆ. `ಉನ್ಮನಾಯ' ಇದು ಪದಿಮೂರನೆಯ ಕಲೆ. ಸದ್ಯೋಜಾತಕ್ಕೆ- `ಸದ್ಯೋಜಾತಂ ಪ್ರಪದ್ಯಾಮಿ' ಇದು ಮೊದಲ ಕಲೆ. `ಸದ್ಯೋಜಾತಾಯವೈ ನಮಃ' ಇದೆರಡನೆಯ ಕಲೆ. `ಭವೆ' ಇದು ಮೂರನೆಯ ಕಲೆ.`ಭವೇ' ಇದು ನಾಲ್ಕನೆಯ ಕಲೆ. `ನಾತಿಭವೆ' ಇದೈದನೆಯ ಕಲೆ. `ಭವಸ್ವ ಮಾಂ' ಇದಾರನೆಯ ಕಲೆ. `ಭವ' ಇದೇಳನೆಯ ಕಲೆ. `ಉದ್ಭವ' ಇದೆಂಟನೆಯ ಕಲೆ. ಇದು ಕಲಾಬ್ರಹ್ಮವಿಂತು ಮೂರ್ತಿಬ್ರಹ್ಮ ತತ್ವಬ್ರಹ್ಮ ಭೂತಬ್ರಹ್ಮ ಪಿಂಡಬ್ರಹ್ಮ ಕಲಾಬ್ರಹ್ಮಗಳೆಂಬ ಪಂಚಬ್ರಹ್ಮಗಳಂ ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.