Index   ವಚನ - 1    Search  
 
ನಿಜಾತ್ಮನು ನಿಶ್ಚಯಾತ್ಮನು ಜೀವಾತ್ಮನು ಪರಮಾತ್ಮನು ಎಂಬೀ ಭೇದವಹಲ್ಲಿ ಆದುದು ಹುಸಿಯೋ? ದಿಟವೋ? ಇಂತೀ ಅಂತರಾತ್ಮನಲ್ಲಿ ಕುರುಹುಗೊಂಡು ತಿರುಗುವುದು ನಾಲ್ಕೊ? ಮತ್ತೆ ಸರ್ವಾತ್ಮ ಭೇದವೊ? ಜನನದಲ್ಲಿ ಉತ್ಸಾಹ, ಮರಣದಲ್ಲಿ ಶೋಕ; ಇಂತೀ ಉಭಯವನರಿವುದು ಆತ್ಮಹಲವೊ? ಉಭಯವೊ? ಏಕವೊ ಎಂಬುದ ತಿಳಿದು, ದಿನದಲ್ಲಿ ಚಲನೆ, ರಾತ್ರಿಯಲ್ಲಿ ಜಾಹ್ಯೆಗೊಳಗಪ್ಪುದು ಜೀವನೊ? ಪರಮನೊ? ಎಂಬುದು ವಿಚಾರಿಸಿ ಇಂದ್ರಿಯಂಗಳ ಸಕಲ ಸುಖಂಗಳಲ್ಲಿ ಸಂಗವಾಗಿ ಲೀಲೋಲ್ಲಾಸತೆ ಇಷ್ಟುದೆ ಪರಮನೊ? ಸಕಲ ರುಜೆ ಭವದುಃಖಗಳನನುಭವಿಸುವುದು, ನೋವುದು ಬೇವುದು ಜೀವನೆ, ಇಂತೀ ಜೀವ ಪರಮನೆಂದು ಆತ್ಮಂಗೆ ಕಲ್ಪಿಸುವಲ್ಲಿ, ಅದಾವ ಪಿಂಡಜ್ಞಾನ ಭೇದ ಎಂಬುದ ವಿಚಾರಿಸಬೇಕು. ಇದು ಪಿಂಡಜ್ಞಾನ ಸಂಬಂಧ ಜ್ಞಾನ ಪಿಂಡೋದಯ, ಬಸವಣ್ಣಪ್ರಿಯ ಕೂಡಲಚೆನ್ನಸಂಗಮದೇವರಲ್ಲಿ.